ರಾಜ್ಯದಲ್ಲಿನ RTO ಕಚೇರಿಗಳಲ್ಲಿ ನಡೆದುಬಂದಿರುವ ಮಧ್ಯವರ್ತಿಗಳ ಹಾವಳಿಗೆ ಸರ್ಕಾರ ಈಗ ಕಠಿಣ ಕ್ರಮಕ್ಕೆ ಮುಂದಾಗಿದೆ. ಮಧ್ಯವರ್ತಿಗಳ ಮೂಲಕ ಕೆಲಸ ಮಾಡಿಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಸ್ಪಷ್ಟ ಸೂಚನೆ ನೀಡಿದ್ದಾರೆ.
ಮೇಲ್ಮನೆಯ ಸದಸ್ಯೆ ಡಾ. ಉಮಾಶ್ರೀ ಪ್ರಶ್ನೆಗೆ ಉತ್ತರಿಸುತ್ತಾ ಸಚಿವರು, ಯಾವುದೇ RTO ಕಚೇರಿಯಲ್ಲಿ ಮಧ್ಯವರ್ತಿಗಳು ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾದರೆ, ಆ ಕಚೇರಿಯ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಪರಿಗಣಿಸಲಾಗುತ್ತದೆ. ಅವರನ್ನು ನಿಯಮಾನುಸಾರ ಶಿಸ್ತು ಕ್ರಮಕ್ಕೆ ಗುರಿಪಡಿಸಲಾಗುವುದು, ಎಂದು ಕಡ್ಡಾಯ ಎಚ್ಚರಿಕೆ ನೀಡಿದ್ದಾರೆ.
RTO ಕಚೇರಿಗಳು ಜನಸೇವೆಗಾಗಿ ಇದ್ದರೂ, ಮಧ್ಯವರ್ತಿಗಳ ಹಸ್ತಕ್ಷೇಪದಿಂದ ನಾಗರಿಕರು ಅನಗತ್ಯ ಹಣ ಖರ್ಚು ಮಾಡುತ್ತಿದ್ದಾರೆ ಎಂದು ಸಚಿವರು ಹೇಳಿದ್ದಾರೆ.
ಯಾವುದೇ ದೂರು ಬಂದರೆ ತಕ್ಷಣ ತನಿಖೆ ನಡೆಸಿ, ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂಬ ಸಚಿವರ ಎಚ್ಚರಿಕೆಯಿಂದ, ರಾಜ್ಯದಲ್ಲಿ RTO ಸೇವೆಗಳು ಹೆಚ್ಚು ಪಾರದರ್ಶಕವಾಗುವ ನಿರೀಕ್ಷೆ ವ್ಯಕ್ತವಾಗಿದೆ.








