ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಘಟನೆಗಳು, ಕೋಮು ಸಂಘರ್ಷಗಳು ಮತ್ತು ಸರಣಿ ಕೊಲೆಗಳು ರಾಜ್ಯ ರಾಜಕೀಯವನ್ನು ತೀವ್ರವಾಗಿ ತಲ್ಲಣಗೊಳಿಸಿವೆ. ಇಂತಹ ಪರಿಸ್ಥಿತಿಗಳ ಮಧ್ಯೆ, ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ದಿನೇಶ್ ಗುಂಡೂರಾವ್ ಅವರು ತಮ್ಮ ಸ್ಥಾನದಿಂದ ಹಿಂದೆ ಸರಿಯುವ ಸಾಧ್ಯತೆ ಇದೆ ಎಂಬ ಸುದ್ದಿ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕಳೆದ ಒಂದು ತಿಂಗಳಿನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಲೆಗಳು, ಪ್ರತಿಭಟನೆಗಳು ಹಾಗೂ ಧರ್ಮಾಧಾರಿತ ಸಂಘರ್ಷಗಳು ನಡೆಯುತ್ತಿದ್ದು, ಸಾರ್ವಜನಿಕ ಶಾಂತಿ ಮತ್ತು ಭದ್ರತೆಗೆ ಧಕ್ಕೆ ಉಂಟಾಗಿದೆ. ಇದರಿಂದ ಜಿಲ್ಲೆಯ ಆಡಳಿತ ಮತ್ತು ಶಾಂತಿ ಕಾಪಾಡುವ ಜವಾಬ್ದಾರಿಯ ಬಗ್ಗೆ ಉಸ್ತುವಾರಿ ಸಚಿವರ ಮೇಲೆ ಒತ್ತಡ ಹೆಚ್ಚಾಗಿದೆ.
ಮುಖ್ಯಮಂತ್ರಿ ನಿವಾಸದಲ್ಲಿ ಹೈ ಲೆವೆಲ್ ಮೀಟಿಂಗ್
ಈ ನಿಟ್ಟಿನಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸ ‘ಕಾವೇರಿ’ಯಲ್ಲಿ ನಡೆದ ಹೈ ಲೆವೆಲ್ ಸಭೆಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಡಿಜಿಪಿ ಹಾಗೂ ಐಜಿಪಿ ಡಾ. ಎಂ.ಎ.ಸಲೀಂ, ಮತ್ತಿತರ ಉನ್ನತ ಅಧಿಕಾರಿಗಳು ಭಾಗವಹಿಸಿದ್ದು, ಜಿಲ್ಲೆಯ ಪರಿಸ್ಥಿತಿಯನ್ನು ಚರ್ಚಿಸಲಾಗಿದೆ. ಈ ಸಭೆಯಲ್ಲಿ ದಿನೇಶ್ ಗುಂಡೂರಾವ್ ಉಸ್ತುವಾರಿ ಸ್ಥಾನದಿಂದ ಹಿಂದೆ ಸರಿಯಲು ಮುಂದಾಗಿದ್ದರು ಎಂಬ ವರದಿಗಳು ಹೊರಬಿದ್ದಿವೆ.
ದಕ್ಷಿಣ ಕನ್ನಡದಲ್ಲಿ ಮೂಡಿರುವ ಆತಂಕದ ವಾತಾವರಣದ ನಡುವೆಯೂ, ಸಾರ್ವಜನಿಕರು ಶಾಂತಿಯುತ ಪರಿಸರದ ನಿರೀಕ್ಷೆಯಲ್ಲಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಕೂಡ ಈ ಬೆಳವಣಿಗೆಗೆ ಸಂಬಂಧಿಸಿದಂತೆ ಸಾಕಷ್ಟು ಪ್ರತಿಕ್ರಿಯೆಗಳು ಹರಿದಾಡುತ್ತಿವೆ.
ಉಸ್ತುವಾರಿ ಸಚಿವ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿಗೆ ಇನ್ನೂ ಅಧಿಕೃತ ದೃಢೀಕರಣ ಬಂದಿಲ್ಲ.








