ಕಲಬುರಗಿ : ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಮಾಡಲು ಮತ್ತೆ ಲಾಕ್ ಡೌನ್ ಮಾಡಲಾಗುತ್ತೆ ಎಂಬ ವದಂತಿಗಳು ಶುರುವಾಗಿವೆ. ಹಾಗಾಗಿ ಲಾಕ್ ಡೌನ್ ಮಾಡುವ ವಿಚಾರದಲ್ಲಿ ಸಾಕಷ್ಟು ಗೊಂದಲಗಳ ಸೃಷಿಯಾಗಿವೆ. ಅಲ್ಲದೆ ಲಾಕ್ ಡೌನ್ ಮಾಡಿದರೇ ನಮ್ಮ ಬದುಕು ಕಥೆ ಏನಪ್ಪ ಎಂದು ಕೆಲವರು ತಲೆ ಮೇಲೆ ಕೈ ಇಟ್ಟಿದ್ದಾರೆ. ಇನ್ನೊಂದೆಡೆ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ ಎಂಬ ಆತಂಕ ಹೆಚ್ಚಾಗಿದೆ.
ಲಾಕ್ ಡೌನ್ ಆಗುತ್ತಾ ಎಂಬ ವಿಚಾರಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ. ಇಂದು ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾಡಲ್ಲ. ಜೂನ್ 16-17 ಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಲ್ಲ ರಾಜ್ಯಗಳ ಸಿಎಂಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸುತ್ತಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಸಭೆ ನಡೆಸಿ ದೇಶದಲ್ಲಿ ಕೊರೊನಾ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆಯುತ್ತಾರೆ. ಇದು ಐದನೇ ಬಾರಿಗೆ ಅವರು ವಿಡಿಯೋ ಕಾನ್ಫರೆನ್ಸ್ ನಡೆಸುತ್ತಿರುವುದು. ಮೋದಿ ಅವರು ವಿಡಿಯೋ ಸಂವಾದ ಮಾಡುತ್ತಾರೆ ಎನ್ನುವ ಕಾರಣಕ್ಕೆ ಮತ್ತೆ ಲಾಕ್ ಡೌನ್ ಮಾಡಲಾಗುವುದು ಎಂಬ ಊಹಾಪೋಹ ಎದ್ದಿದೆ. ಆದರೆ ಯಾವುದೇ ಕಾರಣಕ್ಕೂ ಮತ್ತೆ ಲಾಕ್ ಡೌನ್ ಆಗುವುದಿಲ್ಲ.
ಕ್ವಾರಂಟೈನ್ ನಿಯಮ ಬದಲು
ರಾಜ್ಯದಲ್ಲಿ ಕ್ವಾರಂಟೈನ್ ನಿಯಮ ಬದಲಾಯಿಸಿದ್ದೇವೆ. ಹೊರ ದೇಶದಿಂದ ಮತ್ತು ಮಹಾರಾಷ್ಟ್ರದಿಂದ ಬಂದವರನ್ನು ಮಾತ್ರ ಕಾರಂಟೈನ್ ಮಾಡಲಾಗುತ್ತದೆ. ಅಲ್ಲದೆ ಕ್ವಾರಂಟೈನ್ ಕೇಂದ್ರಗಳಲ್ಲಿ ಅವ್ಯವಸ್ಥೆಗಳಿಲ್ಲ. ಸರ್ಕಾರದ ಮಾರ್ಗಸೂಚನೆಯಂತೆ ಕ್ವಾರಂಟೈನ್ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಇದೆ ವೇಳೆ ವರದಿ ಬರುವ ಮುನ್ನ ಶಂಕಿತರನ್ನು ಮನೆಗೆ ಕಳುಹಿಸುವ ವಿಚಾರಕ್ಕೆ ಸಮರ್ಥನೆ ನೀಡಿ ಅವರು, ರೋಗ ಲಕ್ಷಣಗಳು ಇಲ್ಲದೆ ಹೋದರೆ ಸೋಂಕು ಹರಡುವುದಿಲ್ಲ. ಇದರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟವಾಗಿ ಹೇಳಿದೆ. ಹಾಗಾಗಿ ಮನೆಗೆ ಕಳಿಸಲಾಗಿದೆ ಎಂದು ಸಚಿವರು ಹೇಳಿದರು.








