minister dr k sudhakar | ಮೋದಿಯಂತಹ ಪ್ರಧಾನಿ ಸಿಕ್ಕಿರುವುದು ನಮ್ಮ ಪುಣ್ಯ
ಚಿಕ್ಕಬಳ್ಳಾಪುರ : ಮೋದಿಯಂತಹ ಪ್ರಧಾನಿ ಸಿಕ್ಕಿರುವುದು ನಮ್ಮ ಪುಣ್ಯ ಎಂದು ಸಚಿವ ಡಾ.ಕೆ.ಸುಧಾಕರ್ ಬಣ್ಣಿಸಿದ್ದಾರೆ.
ಸೆ.8ರಂದು ದೊಡ್ಡಬಳ್ಳಾಪುರದಲ್ಲಿ ನಡೆಯಲಿರುವ ಜನೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಶುಕ್ರವಾರ ಮಾತನಾಡಿದ ಅವರು, ನೂರಾರು ಕಾರ್ಯಕ್ರಮಗಳನ್ನು ಜನಸಾಮಾನ್ಯರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನೀಡಲಾಗುತ್ತಿದೆ. ಗೌರಿಬಿದನೂರು ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲಾಗುವುದು, ಎತ್ತಿನಹೊಳೆ ಯೋಜನೆ ಶೀಘ್ರವೇ ಅನುಷ್ಠಾನವಾಗಲಿದೆ, ಎಚ್ಎನ್ ವ್ಯಾಲಿ ಈಗಾಗಲೇ ಅನುಷ್ಠಾನವಾಗಿ ಜನರ ಸಮಸ್ಯೆ ಪರಿಹಾರ ಮಾಡುವಲ್ಲಿ ಯಶಸ್ವಿಯಾಗಿದೆ, ಅಡುಗೆ ಅನಿಲದ ಜೊತೆಗೆ ಸ್ಟೌವ್ ಕೂಡಾ ಉಚಿತವಾಗಿ ವಿತರಿಸಲಾಗಿದೆ, ದೇಶದಲ್ಲಿ 10 ಕೋಟಿ ಶೌಚಾಲಯ ಉಚಿತವಾಗಿ ನಿರ್ಮಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ, ಇಂತಹ ಪ್ರಧಾನಿ ದೊರೆತಿರುವುದು ಈ ದೇಶದ ಪುಣ್ಯ ಎಂದು ಬಣ್ಣಿಸಿದರು.
ಇಂದಿಗೂ ಹಲವು ದೇಶಗಳು ಕೋವಿಡ್ ನಿಯಂತ್ರಣದಲ್ಲಿ ವೈಫಲ್ಯವೇ ಹೊಂದಿವೆ, ಆದರೆ ಭಾರತದಲ್ಲಿ 140 ಕೋಟಿ ಮಂದಿಗೆ ಎರಡು ಡೋಸ್ ಲಸಿಕೆ ನೀಡುವಲ್ಲಿ ಯಶಸ್ವಿಯಾಗಿದ್ದೇವೆ, ಆರ್ಥಿಕವಾಗಿಯೂ ಕೋವಿಡ್ ನಂತರ ದೇಶ ಆರ್ಥಿಕ ಪುನಶ್ಚೇತನವಾಗುತ್ತಿದೆ, ವಿಶ್ವದ ಅನೇಕ ರಾಷ್ಟ್ರಗಳು ಆರ್ಥಿಕ ಹಿಂಜೆರಿಕೆಯಿಂದ ನರಳುತ್ತಿವೆ, ಇಂದು ಜಿಡಿಪಿ 13.5 ರಷ್ಟಕ್ಕೆ ಏರಿಕೆಯಾಗಿದೆ, ಜಿಎಸ್ ಟಿ ಹೆಚ್ಚಾಗುವ ಜೊತೆಗೆ ಜಿಡಿಪಿಯೂ ಹೆಚ್ಚಾಗುತ್ತಿದೆ, ಇದಕ್ಕೆ ಬದ್ಧತೆಯುಳ್ಳ ಬಿಜೆಪಿ ಸರ್ಕಾರಗಳೇ ಕಾರಣ ಎಂದರು.
ಇಂತಹ ಸಂದರ್ಭದಲ್ಲಿ ಜನರ ಹಬ್ಬ ಆಚರಿಸಬೇಕು ಎಂಬುದು ಸರ್ಕಾರದ ಆಶಯವಾಗಿದೆ. ನಾವು ಯಾರ ಹುಟ್ಟುಹಬ್ಬವನ್ನೂ ಆಚರಿಸುತ್ತಿಲ್ಲ, ಜನರ ಹಬ್ಬವನ್ನು ಆಚರಿಸುತ್ತಿದ್ದೇವೆ, ರಾಜ್ಯದಲ್ಲಿ ಮೊದಲ ಕಾರ್ಯಕ್ರಮ ದೊಡ್ಡಬಳ್ಳಾಪುರಕ್ಕೆ ನೀಡಿರುವುದು ವಿಶೇಷ. ಪಕ್ಷ ಸಮರ್ಥವಾಗಿರುವ ಕಡೆ ಮೊದಲ ಕಾರ್ಯಕ್ರಮ ಮಾಡಬಹುದಿತ್ತು. ಆದರೆ ಪಕ್ಷ ಬಲಹೀನವಾಗಿರುವ ಜಾಗದಲ್ಲಿಯೇ ಕಾರ್ಯಕ್ರಮ ಆಯೋಜಿಸಿರುವುದು ವಿಶೇಷ. ಅತಿ ಹೆಚ್ಚು ಜನರು ಗೌರಿಬಿದನೂರಿನಿಂದ ಕರೆತರುವ ಕೆಲಸವಾಗಬೇಕು ಎಂದು ಹೇಳಿದರು.
ಬಿಜೆಪಿ ಜನರಿಗಾಗಿ ಶ್ರಮಿಸುತ್ತಿರುವ ಪಕ್ಷವಾಗಿದೆ. ಕಳೆದ ಮೂರು ವರ್ಷದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಾರಿಗೆ ತಂದಿರುವ ಜನಪರ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸವಾಗಬೇಕು ಎಂಬ ಉದ್ಧೇಶದಿಂದ ಜನೋತ್ಸವ ಆಯೋಜಿಸಿದ್ದು, ಇದನ್ನು ಯಶಸ್ವಿಗೊಳಿಸಲು ಎಲ್ಲರೂ ಕೈ ಜೋಡಿಸಬೇಕೆಂದು ಸಚಿವರು ಕೋರಿದರು.
ಕಾರ್ಯಕ್ರಮದಲ್ಲಿ ದ್ರಾಕ್ಷಿ ಮಂಡಳಿ ಅಧ್ಯಕ್ಷ ರವಿನಾರಾಯಣರೆಡ್ಡಿ, ಮಾಜಿ ಶಾಸಕಿ ಜೋತಿರೆಡ್ಡಿ, ಎಂ.ಎನ್. ಶಶಿಧರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.