ಗಂಡೆದೆಯ ಪ್ರಧಾನಿ ಪಡೆದಿರುವುದು ಭಾರತದ ಹೆಮ್ಮೆ : ಈಶ್ವರಪ್ಪ
ಶಿವಮೊಗ್ಗ :ಪ್ರಧಾನಿ ನರೇಂದ್ರ ಮೋದಿಯವರು ದೇಶದ ಸ್ವಾಭಿಮಾನವನ್ನು ವಿಶ್ವದಲ್ಲೇ ಮೇಲ್ದರ್ಜೆಗೆ ಏರಿಸಿರುವುದು ನಮ್ಮ ಹೆಮ್ಮೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ವರ್ಚುವಲ್ ಜಿಲ್ಲಾ ಬಿಜೆಪಿ ಕಾರ್ಯಕಾರಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ದೇಶದ ಸ್ವಾಭಿಮಾನವನ್ನು ವಿಶ್ವದಲ್ಲೇ ಮೇಲ್ದರ್ಜೆಗೆ ಏರಿಸಿರುವುದು ನಮ್ಮ ಹೆಮ್ಮೆ. ಭಾರತವನ್ನು ಪಾಕಿಸ್ತಾನ ಹಾಗೂ ಚೀನಾ ಹಗುರವಾಗಿ ತೆಗೆದುಕೊಂಡಿದ್ದವು. ಆಗ ಭಾರತದ ಒಂದಿಂಚು ಭೂಮಿಯನ್ನು ಸಹ ಪಾಕಿಸ್ತಾನಕ್ಕೆ ಹಾಗೂ ಚೀನಾಕ್ಕೆ ಬಿಟ್ಟುಕೊಡಲ್ಲ ಎಂದು ತೋರಿಸಿಕೊಟ್ಟ ಗಂಡೆದೆಯ ಪ್ರಧಾನಿ ಪಡೆದಿರುವುದು ಭಾರತದ ಹೆಮ್ಮೆ ಎಂದರು.
ಗಡಿಯಲ್ಲಿ ಅತಿಕ್ರಮಣ ಮಾಡುವಾಗ ಪ್ರಾಣ ಬಿಟ್ಟರೂ ದೇಶದ ಭೂಮಿ ಬಿಡಲ್ಲ ಎಂದು ಹೋರಾಡುತ್ತಿದ್ದ ಸೈನಿಕರಿಗೆ ಆತ್ಮಸ್ಥೈರ್ಯ ತುಂಬುವ ಸಲುವಾಗಿ ತಮ್ಮ ಎಸಿ ಕಚೇರಿಯಲ್ಲಿ ಕೂರದೆ ಗಡಿಗೆ ಹೋಗಿ ಭಾರತೀಯ 135 ಕೋಟಿ ಜನ ನಿಮ್ಮೊಂದಿಗೆ ಇದ್ದೇವೆ ಎಂದು ಹೇಳಿದ ಮೊದಲ ಪ್ರಧಾನಿ ನರೇಂದ್ರ ಮೋದಿಯವರು. ದೇಶದಲ್ಲಿ ಕೊರೊನಾ ಸಂದರ್ಭದಲ್ಲಿ ಯಾರೊಬ್ಬರೂ ಸಹ ಊಟ ಇಲ್ಲದೇ ಸಾಯಬಾರದು ಎಂದು 20 ಲಕ್ಷ ಕೋಟಿ ರೂಪಾಯಿಯ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಬಡವರ ಪರವಾಗಿದ್ದೇವೆ ಎಂದು ತೋರಿಸಿಕೊಟ್ಟಿದ್ದಾರೆ ಎಂದು ಈಶ್ವರಪ್ಪ ಹೇಳಿದರು.








