ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೃಷಿ ಮೇಳದ ಮುಖ್ಯ ವೇದಿಕೆಯಲ್ಲೇ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್.ಪಾಟೀಲ ಅವರಿಗೆ ಕ್ಲಾಸ್ ತೆಗೆದುಕೊಂಡ ಪ್ರಸಂಗ ನಡೆಯಿತು.
ಕೃಷಿ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಲಾಡ್, ಕಳೆದ ವರ್ಷ ಕೃಷಿ ಮೇಳಕ್ಕೆ 10 ಲಕ್ಷ ಜನ ಬಂದಿದ್ದರು ಎನ್ನುತ್ತೀರಿ. ಅದರಿಂದ ಏನು ಉಪಯೋಗ ಆಯಿತು? ಕಳೆದ ಐದು ವರ್ಷದ ಕೃಷಿ ಮೇಳದ ಪ್ರಗತಿ ಏನಾಗಿದೆ? ಈ ಬಗ್ಗೆ ಕಳೆದ ವರ್ಷವೇ ನಾನು ನಿಮಗೆ ಕೇಳಿದ್ದೆ. ಆ ಮೇಲೆ ನೀವು ನನ್ನನ್ನು ಸಂಪರ್ಕಿಸಲೇ ಇಲ್ಲ ಎಂದು ಗರಂ ಆಗಿದ್ದರು.
ಸರ್ಕಾರದಿಂದ ಬಂದ ಹಣದಿಂದ ಮಾಡದೇ ಇರುವ ಕೃಷಿ ಮೇಳ ಆಗದೇ ಇರಬಹುದು. ಸ್ವಯಂ ದೇಣಿಗೆ ಹಣದ ಸಂಗ್ರಹದ ಮೂಲಕ ನಡೆಯುತ್ತಿದೆ. ಆದರೆ, ಮೇಳದ ಪ್ರಗತಿ ಏನಿದೆ? ಎಲ್ಲರನ್ನೂ ಸೇರಿಸಿ ಸಭೆ ಮಾಡಿ ಎಂದು ಹೇಳಿದ್ದೇವು. ಸಭೆ ಏಕೆ ಮಾಡಿಲ್ಲ? ನೀವು ವೈಯಕ್ತಿಕವಾಗಿ ಸಭೆ ಮಾಡಿದರೆ ಹೇಗೆ? ಯಾಕೆ ನೀವು ಯಾರನ್ನೂ ಕರೆಯುವುದಿಲ್ಲ.
ನೀವೇನು ಇಲ್ಲಿ ಶಾಶ್ವತ ಅಲ್ಲ. ನಾವೂ ಶಾಶ್ವತ ಅಲ್ಲ. ವ್ಯವಸ್ಥೆ ಮಾತ್ರ ಇರುವುದು. ನಿಮ್ಮಲ್ಲಿ ಕೃಷಿಗೆ ಸಂಬಂಧಿಸಿದ ಮಾಹಿತಿಯೇ ಇರುವುದಿಲ್ಲ ಎಂದು ಕುಲಪತಿಗಳ ಮೇಲೆ ಸಚಿವ ಲಾಡ್ ತೀವ್ರ ಗರಂ ಆದ ಪ್ರಸಂಗ ನಡೆಯಿತು.








