ಕೋಲಾರ : ಗ್ರಾಮ ಪಂಚಾಯತಿ ಕಟ್ಟಡ ಉದ್ಘಾಟನೆ ವೇಳೆ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್, ಮಾಲೂರು ಕಾಂಗ್ರೆಸ್ ಶಾಸಕ ನಂಜೇಗೌಡ ನಡುವೆ ವಾಗ್ವಾದ ನಡೆದಿರುವ ಘಟನೆ ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಲಕ್ಕೂರು ಗ್ರಾಮದಲ್ಲಿ ಜರುಗಿದೆ.
ಇಂದು ಲಕ್ಕೂರು ಗ್ರಾಮದಲ್ಲಿ ಗ್ರಾಮ ಪಂಚಾಯತಿ ಕಟ್ಟಡ ಉದ್ಘಾಟನಾ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮ ಕಾಂಗ್ರೆಸ್ ಶಾಸಕರ ನಂಜೇಗೌಡ ಅಧ್ಯಕ್ಷತೆಯಲ್ಲಿ ಜರುಗಬೇಕಿತ್ತು. ಆದ್ರೆ ಅವರು ಬರೋದಕ್ಕೂ ಮೊದಲೇ ಕಟ್ಟಡವನ್ನು ಉದ್ಘಾಟಿಸಿದ್ದಕ್ಕೆ ಶಾಸಕ ಸಂಜೇಗೌಡ ಬೇಸರಗೊಂಡರು. ಅಲ್ಲದೇ ಸಚಿವರು ಪ್ರೊಟೊಕಾಲ್ ಅನುಸರಿಸುತ್ತಿಲ್ಲವೆಂದು ಅಸಮಧಾನ ವ್ಯಕ್ತಪಡಿಸಿದರು. ಇದೇನು ನಿಮ್ಮ ಪಾರ್ಟಿ ಪ್ರೋಗ್ರಾಂ ಅಲ್ಲ , ನೀವು ಮಾಹಿತಿ ನೀಡದೆಯೇ ಬಂದಿದ್ದೀರಾ ಎಂದು ಸಚಿವ ಹೆಚ್.ನಾಗೇಶ್ ಅವರನ್ನು ಪ್ರಶ್ನಿಸಿದರು.
ಈ ವೇಳೆ ಸಚಿವರು ಮಾತನಾಡಿ ಕಾರ್ಯಕ್ರಮಕ್ಕೆ ನಾನು ಸಮಯಕ್ಕೆ ಸರಿಯಾಗಿ ಬಂದಿದ್ದೇನೆ ನೀವು ಬಂದಿಲ್ಲ ಎಂದು ಉತ್ತರ ನೀಡಿದರು. ಇನ್ನೂ ಕಟ್ಟಡ ಉದ್ಘಾಟನಾ ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ ಶಾಸಕ ಕೆ.ವೈ.ನಂಜೇಗೌಡ, ಸಚಿವರು ಬಿಜೆಪಿ ಮುಖಂಡರನ್ನ ಇರಿಸಿಕೊಂಡು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ ಎಂದು ಆರೋಪಿಸಿದರು.