ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಸಿದ್ದರಾಮಯ್ಯ ಇಲ್ಲದೆ ಕಾಂಗ್ರೆಸ್ ಇಲ್ಲ ಎಂಬ ಹಿರಿಯ ಶಾಸಕ ಕೆ.ಎನ್. ರಾಜಣ್ಣ ಅವರ ಹೇಳಿಕೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ವ್ಯಕ್ತಿಗಿಂತ ಪಕ್ಷವೇ ಶ್ರೇಷ್ಠ ಎಂಬುದನ್ನು ಮರೆಯಬಾರದು ಎಂದು ಹೇಳುವ ಮೂಲಕ, ಸ್ವಪಕ್ಷದ ಹಿರಿಯ ಶಾಸಕರ ಹೇಳಿಕೆಯನ್ನು ಕಟುವಾಗಿ ಟೀಕಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸೂಕ್ತ ಸ್ಥಾನಮಾನ ನೀಡದಿದ್ದರೆ ಕರ್ನಾಟಕದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತದೆ ಎಂದು ರಾಜಣ್ಣ ನೀಡಿದ್ದ ಹೇಳಿಕೆ ಪಕ್ಷದ ಆಂತರಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಹೇಳಿಕೆಗೆ ತಿರುಗೇಟು ನೀಡಿರುವ ಪ್ರಿಯಾಂಕ್ ಖರ್ಗೆ, ಪಕ್ಷದ ಶಿಸ್ತು ಮತ್ತು ಸಿದ್ಧಾಂತದ ಪಾಠ ಮಾಡಿದ್ದಾರೆ.
ಗೆದ್ದ ನಂತರ ಇಂತಹ ಮಾತು ಸರಿಯಲ್ಲ
ರಾಜಣ್ಣ ಅವರ ಹೆಸರನ್ನು ನೇರವಾಗಿ ಪ್ರಸ್ತಾಪಿಸದೆ ವಾಗ್ದಾಳಿ ನಡೆಸಿದ ಪ್ರಿಯಾಂಕ್ ಖರ್ಗೆ, ಚುನಾವಣೆ ಬಂದಾಗ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದ ಬಿ ಫಾರಂ ಬೇಕು. ಚುನಾವಣಾ ಪ್ರಚಾರದ ಸಮಯದಲ್ಲಿ ಕಾಂಗ್ರೆಸ್ ನಾಯಕತ್ವ ಬೇಕು, ಪಕ್ಷದ ಸಿದ್ಧಾಂತ ಬೇಕು ಮತ್ತು ಕಾರ್ಯಕರ್ತರ ಬಲ ಬೇಕು. ಆದರೆ, ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದ ನಂತರ, ಪಕ್ಷಕ್ಕಿಂತ ವ್ಯಕ್ತಿಯೇ ಮುಖ್ಯ ಎಂಬಂತಹ ಮಾತುಗಳನ್ನು ಆಡುವುದು ತಪ್ಪು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವ್ಯಕ್ತಿಗಳಿಗಾಗಿ ಪಕ್ಷವಲ್ಲ, ಪಕ್ಷಕ್ಕಾಗಿ ವ್ಯಕ್ತಿ
ಕಾಂಗ್ರೆಸ್ ಪಕ್ಷವು ಕೇವಲ ವ್ಯಕ್ತಿಗಳಿಂದ ಅಥವಾ ವ್ಯಕ್ತಿಗಳಿಗಾಗಿ ಸೃಷ್ಟಿಯಾದದ್ದಲ್ಲ. ಈ ಪಕ್ಷಕ್ಕೆ 140 ವರ್ಷಗಳ ಸುದೀರ್ಘ ಇತಿಹಾಸವಿದೆ. ನಾವಿಂದು ನಾಯಕರಾಗಿರುವುದೇ ಪಕ್ಷದಿಂದ ಎಂಬುದನ್ನು ಯಾರೂ ಮರೆಯಬಾರದು. ಕಾರ್ಯಕರ್ತರಿಲ್ಲದೆ ನಾನು ನಾಯಕನೂ ಅಲ್ಲ, ಬೇರೆಯವರು ಕೂಡ ನಾಯಕರಾಗಲು ಸಾಧ್ಯವಿಲ್ಲ. ನಾಯಕತ್ವದ ಬೆಳವಣಿಗೆ ಎಂಬುದು ಒಂದು ನಿರಂತರ ಪ್ರಕ್ರಿಯೆಯೇ ಹೊರತು, ಅದು ಒಬ್ಬರಿಗೆ ಸೀಮಿತವಾದುದಲ್ಲ ಎಂದು ಖಡಕ್ ಸಂದೇಶ ರವಾನಿಸಿದರು.
ನಿಗಮ ಮಂಡಳಿಗಳಿಗೆ ಕಾರ್ಯಕರ್ತರ ನೇಮಕಾತಿ ವಿಳಂಬವಾಗುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯದಲ್ಲಿ ತಾಳ್ಮೆ ಅತ್ಯಗತ್ಯ ಎಂದರು. ಎಲ್ಲರಿಗೂ ಒಂದೇ ಬಾರಿಗೆ ಅಧಿಕಾರ ಸಿಗಲು ಸಾಧ್ಯವಿಲ್ಲ. ಈಗಾಗಲೇ ಮಂಡಳಿ ಮತ್ತು ನಿಗಮಗಳಿಗೆ ಅಧ್ಯಕ್ಷರ ನೇಮಕ ನಡೆದಿದ್ದು, ನಿರ್ದೇಶಕರ ನೇಮಕಾತಿ ಬಾಕಿ ಇದೆ. ಶೇಕಡಾ 85ರಷ್ಟು ಪ್ರಕ್ರಿಯೆ ಪೂರ್ಣಗೊಂಡಿದ್ದು, ಉಳಿದ ನೇಮಕಾತಿಗಳೂ ಶೀಘ್ರದಲ್ಲೇ ನಡೆಯಲಿವೆ ಎಂದು ಸ್ಪಷ್ಟಪಡಿಸಿದರು.
ಮಲ್ಲಿಕಾರ್ಜುನ ಖರ್ಗೆಯವರೇ ಮಾದರಿ
ತಾಳ್ಮೆ ಮತ್ತು ಪಕ್ಷನಿಷ್ಠೆಯ ವಿಚಾರದಲ್ಲಿ ಎಐಸಿಸಿ ಅಧ್ಯಕ್ಷ ಹಾಗೂ ತಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಅವರ ಉದಾಹರಣೆಯನ್ನು ಪ್ರಿಯಾಂಕ್ ನೀಡಿದರು. ರಾಜಕೀಯದಲ್ಲಿ ಕಠಿಣ ಪರಿಶ್ರಮ ಮತ್ತು ತಾಳ್ಮೆಗೆ ಮಲ್ಲಿಕಾರ್ಜುನ ಖರ್ಗೆಯವರಿಗಿಂತ ದೊಡ್ಡ ಉದಾಹರಣೆ ಇನ್ನೊಬ್ಬರಿಲ್ಲ. ಕಾರ್ಯಕರ್ತರು ಮತ್ತು ನಾಯಕರು ಈ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಪರೋಕ್ಷವಾಗಿ ಅಸಮಾಧಾನಿತರಿಗೆ ಕಿವಿಮಾತು ಹೇಳಿದರು.
ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಲು ಹೋಗಿ ಪಕ್ಷವನ್ನೇ ಗೌಣ ಮಾಡಲು ಯತ್ನಿಸಿದ ರಾಜಣ್ಣ ಅವರ ಹೇಳಿಕೆಗೆ, ಪ್ರಿಯಾಂಕ್ ಖರ್ಗೆ ಪಕ್ಷದ ಸಿದ್ಧಾಂತದ ಮೂಲಕವೇ ಪ್ರತ್ಯುತ್ತರ ನೀಡಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.








