ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಸ್ತುತ ಸರ್ಕಾರದ ಉಳಿದ ಅವಧಿಗೆ ಸಿಎಂ ಹುದ್ದೆಯ ಮೇಲೆ ಕಣ್ಣಿಡುವ ಬದಲು, ತಮ್ಮ ನಾಯಕತ್ವದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಪೂರ್ಣಾವಧಿಗೆ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂದು ಸಚಿವ ಕೆ.ಎನ್. ರಾಜಣ್ಣ ಅವರು ಶುಕ್ರವಾರ ಸಲಹೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಆಯ್ದ ದಲಿತ ಮತ್ತು ಎಸ್ಟಿ ಸಚಿವರೊಂದಿಗೆ ಭೋಜನಕೂಟ ನಡೆಸಿದ ನಂತರ ಕೆ.ಎನ್. ರಾಜಣ್ಣ ಈ ಹೇಳಿಕೆ ನೀಡಿದ್ದು, ಕಾಂಗ್ರೆಸ್ನಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಮಾರ್ಚ್ ನಂತರ ರಾಜ್ಯದಲ್ಲಿ “ಅಧಿಕಾರ ಹಂಚಿಕೆ” ಸೂತ್ರದಡಿಯಲ್ಲಿ ನಾಯಕತ್ವ ಬದಲಾವಣೆಯಾಗುವ ಸಾಧ್ಯತೆ ಇದೆ ಎಂಬ ಊಹಾಪೋಹಗಳ ನಡುವೆಯೇ ರಾಜಣ್ಣ ಅವರ ಈ ಸಲಹೆ ಹೆಚ್ಚು ಮಹತ್ವ ಪಡೆದುಕೊಂಡಿದೆ.