ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಗುಸುಗುಸು ತಾರಕಕ್ಕೇರಿರುವ ಹೊತ್ತಿನಲ್ಲೇ ಅನಿರೀಕ್ಷಿತ ಬೆಳವಣಿಗೆಯೊಂದು ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತ ಎಂದೇ ಗುರುತಿಸಿಕೊಂಡಿರುವ ಹಾಗೂ ಸಹಕಾರ ಸಚಿವರೂ ಆಗಿರುವ ಕೆ ಎನ್ ರಾಜಣ್ಣ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಖಾಸಗಿ ಹೋಟೆಲ್ ನಲ್ಲಿ ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಮತ್ತು ಡಿಸಿಎಂ ಬಣಗಳ ನಡುವೆ ಶೀತಲ ಸಮರ ನಡೆಯುತ್ತಿರುವಾಗಲೇ ಈ ಭೇಟಿ ನಡೆದಿದ್ದು, ಇದು ರಾಜಕೀಯ ಪಡಸಾಲೆಯಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ.
ದಿಢೀರ್ ಭೇಟಿಯ ಹಿಂದಿನ ಮರ್ಮವೇನು?
ಈ ಚರ್ಚೆ ಶುರುವಾದ ಆರಂಭದಿಂದಲೂ ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಬಹಿರಂಗವಾಗಿಯೇ ಬ್ಯಾಟ್ ಬೀಸುತ್ತಿದ್ದ ರಾಜಣ್ಣ, ಏಕಾಏಕಿ ಡಿಕೆ ಶಿವಕುಮಾರ್ ಅವರ ಬಾಗಿಲು ತಟ್ಟಿರುವುದು ಅಚ್ಚರಿ ಮೂಡಿಸಿದೆ. ಇತ್ತೀಚೆಗಷ್ಟೇ ದಲಿತ ಸಿಎಂ ದಾಳ ಉರುಳಿಸಿದ್ದ ರಾಜಣ್ಣ, ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಮುಖ್ಯಮಂತ್ರಿಯಾಗಲಿ ಎಂದು ಹೇಳಿಕೆ ನೀಡಿದ್ದರು. ಆ ಮೂಲಕ ಪರೋಕ್ಷವಾಗಿ ಡಿಕೆಶಿ ಹಾದಿಗೆ ಅಡ್ಡಗಾಲು ಹಾಕಿದ್ದರು ಎಂದೇ ವಿಶ್ಲೇಷಿಸಲಾಗಿತ್ತು. ಹೀಗಿರುವಾಗ, ಈಗ ಇದ್ದಕ್ಕಿದ್ದಂತೆ ಬೆಂಗಳೂರಿನ ಖಾಸಗಿ ಅತಿಥಿ ಗೃಹದಲ್ಲಿ ಡಿಕೆಶಿ ಅವರನ್ನು ಭೇಟಿಯಾಗಿರುವುದು ಸಂಧಾನದ ಸೂಚನೆಯೇ ಅಥವಾ ಹೊಸ ತಂತ್ರಗಾರಿಕೆಯೇ ಎಂಬ ಪ್ರಶ್ನೆ ಹುಟ್ಟುಹಾಕಿದೆ.
ಡಿಸಿಸಿ ಬ್ಯಾಂಕ್ ವಿವಾದದ ಎಫೆಕ್ಟ್?
ಈ ಭೇಟಿಯ ಹಿಂದೆ ಸ್ಥಳೀಯ ರಾಜಕೀಯ ಮತ್ತು ಅನುದಾನ ಹಂಚಿಕೆಯ ಲೆಕ್ಕಾಚಾರವೂ ಇರುವಂತಿದೆ. ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ತುಮಕೂರು ಡಿಸಿಸಿ ಬ್ಯಾಂಕ್ ಸಾಲ ಹಂಚಿಕೆ ವಿಚಾರ ದೊಡ್ಡ ಮಟ್ಟದ ಸದ್ದು ಮಾಡಿತ್ತು. ಮಧುಗಿರಿ ಕ್ಷೇತ್ರಕ್ಕೆ ಅತಿ ಹೆಚ್ಚು ಸಾಲ ಸೌಲಭ್ಯ ನೀಡಲಾಗಿದ್ದು, ಕುಣಿಗಲ್ ಕ್ಷೇತ್ರಕ್ಕೆ ತಾರತಮ್ಯ ಮಾಡಲಾಗಿದೆ ಎಂದು ಕುಣಿಗಲ್ ಶಾಸಕ ಹಾಗೂ ಡಿಕೆ ಶಿವಕುಮಾರ್ ಅವರ ಸಂಬಂಧಿ ಡಾ ರಂಗನಾಥ್ ತೀವ್ರ ಅಸಮಾಧಾನ ಹೊರಹಾಕಿದ್ದರು.
ಸಚಿವ ರಾಜಣ್ಣ ಅವರ ವಿರುದ್ಧ ರಂಗನಾಥ್ ನೇರ ವಾಗ್ದಾಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ, ತಮ್ಮ ಮತ್ತು ಡಿಕೆಶಿ ಕುಟುಂಬದ ನಡುವಿನ ಮುನಿಸು ಶಮನ ಮಾಡಲು ರಾಜಣ್ಣ ಈ ಭೇಟಿ ನಡೆಸಿದ್ದಾರೆಯೇ ಎಂಬ ಅನುಮಾನವೂ ವ್ಯಕ್ತವಾಗಿದೆ.
ಇನ್ನೊಂದೆಡೆ ನಾಯಕತ್ವ ಬದಲಾವಣೆ ಕುರಿತು ಹೈಕಮಾಂಡ್ ಮಟ್ಟದಲ್ಲಿ ಯಾವುದೇ ಒಪ್ಪಂದ ಆಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದರೆ, ಅಧಿಕಾರ ಹಂಚಿಕೆ ಒಪ್ಪಂದ ಆಗಿದೆ ಎಂದು ಡಿಕೆ ಶಿವಕುಮಾರ್ ಮತ್ತು ಅವರ ಆಪ್ತರು ಪ್ರತಿಪಾದಿಸುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯನವರ ಕಟ್ಟಾ ಬೆಂಬಲಿಗ ರಾಜಣ್ಣ, ಡಿಕೆಶಿ ಪಾಳೆಯಕ್ಕೆ ಕಾಲಿಟ್ಟಿರುವುದು ಸಿದ್ದರಾಮಯ್ಯ ಪಾಳೆಯದಲ್ಲೂ ತಲ್ಲಣ ಮೂಡಿಸುವ ಸಾಧ್ಯತೆಯಿದೆ.
ಸಿಎಂ ಕುರ್ಚಿ ಕದನ, ದಲಿತ ಸಿಎಂ ಕೂಗು ಮತ್ತು ಡಿಸಿಸಿ ಬ್ಯಾಂಕ್ ವಿವಾದಗಳ ಸುಳಿಯಲ್ಲಿ ಸಿಲುಕಿರುವ ರಾಜ್ಯ ರಾಜಕಾರಣದಲ್ಲಿ, ರಾಜಣ್ಣ ಮತ್ತು ಡಿಕೆಶಿ ಭೇಟಿ ಮುಂದಿನ ದಿನಗಳಲ್ಲಿ ಯಾವ ರಾಜಕೀಯ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.








