ಬೆಂಗಳೂರು: ರಾಜ್ಯದ ಸಾರಿಗೆ ಸಂಸ್ಥೆಗಳು ದೇಶದಲ್ಲೇ ಉತ್ತಮ ಸೇವೆಗೆ ಹೆಸರಾಗಿದ್ದರೂ, ಬಸ್ ನಿಲ್ದಾಣಗಳಲ್ಲಿನ ಶೌಚಾಲಯಗಳ ದುಸ್ಥಿತಿ ಇಲಾಖೆಯ ಮಾನ ಕಳೆಯುತ್ತಿದೆ. ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಸಾರ್ವಜನಿಕರ ಆಕ್ರೋಶಕ್ಕೆ ಇದೀಗ ಸ್ವತಃ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಎಚ್ಚೆತ್ತುಕೊಂಡಿದ್ದು, ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಚಾಟಿ ಬೀಸಿದ್ದಾರೆ. ಶೌಚಾಲಯ ನಿರ್ವಹಣೆಯಲ್ಲಿ ವಿಫಲರಾದರೆ ನೇರವಾಗಿ ವಿಭಾಗೀಯ ನಿಯಂತ್ರಣಾಧಿಕಾರಿಗಳನ್ನೇ (DC) ಹೊಣೆಗಾರರನ್ನಾಗಿ ಮಾಡಿ, ಶಿಸ್ತು ಕ್ರಮ ಜರುಗಿಸುವುದಾಗಿ ಸಚಿವರು ಗುಡುಗಿದ್ದಾರೆ.
ಸಾರಿಗೆ ಬಸ್ ನಿಲ್ದಾಣಗಳಲ್ಲಿನ ಶೌಚಾಲಯಗಳು ಗಬ್ಬೆದ್ದು ನಾರುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದ ವ್ಯಾಪಕ ದೂರುಗಳು ಕೇಳಿಬಂದಿದ್ದವು. ಸ್ವತಃ ಉಪ ಲೋಕಾಯುಕ್ತರೇ ಹಲವು ನಿಲ್ದಾಣಗಳಿಗೆ ದಿಢೀರ್ ಭೇಟಿ ನೀಡಿದ ಸಂದರ್ಭದಲ್ಲಿ ಅಸಹ್ಯಕರ ವಾತಾವರಣ ಕಂಡು ಬಿಸಿಮುಟ್ಟಿಸಿದ್ದರು. ಆದರೂ ಕೆಳಹಂತದ ಅಧಿಕಾರಿಗಳು ಎಚ್ಚೆತ್ತುಕೊಳ್ಳದ ಹಿನ್ನೆಲೆಯಲ್ಲಿ, ಸಚಿವ ರಾಮಲಿಂಗಾರೆಡ್ಡಿ ಅವರು ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆಯುವ ಮೂಲಕ ಕಠಿಣ ಸಂದೇಶ ರವಾನಿಸಿದ್ದಾರೆ.
ಘನತೆ ಕಾಪಾಡಿ, ಇಲ್ಲವೇ ಜಾಗ ಖಾಲಿ ಮಾಡಿ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಿಂದ ಪ್ರತಿನಿತ್ಯ ಅಂದಾಜು 1 ಕೋಟಿ 15 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದು, ಸಂಸ್ಥೆಗೆ ದೇಶಮಟ್ಟದ ಹೆಗ್ಗಳಿಕೆ ಇದೆ. ಆದರೆ ಕೆಲವೊಂದು ಬಸ್ ನಿಲ್ದಾಣಗಳಲ್ಲಿನ ಅವ್ಯವಸ್ಥೆ ಮತ್ತು ಅಶುಚಿತ್ವದಿಂದ ಇಲಾಖೆಯ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ. ಉಪ ಲೋಕಾಯುಕ್ತರು ಸ್ವಯಂ ದೂರು ದಾಖಲಿಸಿಕೊಂಡು ಮಾಹಿತಿ ಕೇಳುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಗಂಭೀರ ವಿಷಯ ಎಂದು ಸಚಿವರು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರತಿ ತಿಂಗಳು ಡಿಸಿಗಳ ರೌಂಡ್ಸ್ ಕಡ್ಡಾಯ
ಇನ್ನು ಮುಂದೆ ಎಸಿ ರೂಮುಗಳಲ್ಲಿ ಕುಳಿತು ಆದೇಶ ಮಾಡಿದರೆ ಸಾಲದು, ಅಧಿಕಾರಿಗಳು ಫೀಲ್ಡಿಗಿಳಿಯಲೇಬೇಕು ಎಂದು ಸಚಿವರು ತಾಕೀತು ಮಾಡಿದ್ದಾರೆ.
1. ಆಯಾ ನಿಗಮಗಳ ವ್ಯಾಪ್ತಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಂಗಳಿಗೆ ಒಮ್ಮೆಯಾದರೂ ಕಡ್ಡಾಯವಾಗಿ ಬಸ್ ನಿಲ್ದಾಣಗಳಿಗೆ ಖುದ್ದು ಭೇಟಿ ನೀಡಬೇಕು.
2. ನಿಲ್ದಾಣ ಹಾಗೂ ಶೌಚಾಲಯಗಳ ನೈರ್ಮಲ್ಯವನ್ನು ಪರಿಶೀಲಿಸಬೇಕು.
3. ಸಮರ್ಪಕ ನಿರ್ವಹಣೆಯ ಕುರಿತು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು.
ಮುಲಾಜಿಲ್ಲದೆ ಕ್ರಮ
ಸಚಿವರ ಈ ಆದೇಶವನ್ನು ಯಾವುದೇ ಅಧಿಕಾರಿ ಉಲ್ಲಂಘಿಸಿದರೆ ಅಥವಾ ತಪಾಸಣೆಯ ವೇಳೆ ಶೌಚಾಲಯಗಳು ಅಶುಚಿಯಾಗಿರುವುದು ಕಂಡುಬಂದರೆ, ಅಂತಹ ವಿಭಾಗೀಯ ನಿಯಂತ್ರಣಾಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ರಾಮಲಿಂಗಾರೆಡ್ಡಿ ಅವರು ಕಡಕ್ ಎಚ್ಚರಿಕೆ ನೀಡಿದ್ದಾರೆ. ಸಚಿವರ ಈ ಬಿಗಿ ಧೋರಣೆಯಿಂದಾಗಿ ಸಾರಿಗೆ ಇಲಾಖೆಯ ಅಧಿಕಾರಿಗಳಲ್ಲಿ ನಡುಕ ಹುಟ್ಟಿದ್ದು, ಬಸ್ ನಿಲ್ದಾಣಗಳು ಹೈಟೆಕ್ ಆಗದಿದ್ದರೂ, ಕನಿಷ್ಠ ಸ್ವಚ್ಛವಾಗಿಯಾದರೂ ಇರುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.








