ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಸೋಂಕಿತರ ಆರೋಗ್ಯ ವಿಚಾರಿಸಿದ ಸಚಿವ ಸುರೇಶ್ ಕುಮಾರ್
ಚಾಮರಾಜನಗರ : ರಾಜ್ಯಾದ್ಯಂತ ಕೊರೊನಾ 2ನೇ ಅಲೆ ಅತಿ ಭಯನಾಕರೂಪ ಪಡೆದಿದ್ದು, ಸಾವು ನೋವುಗಳ ಸಂಖ್ಯೆ , ದಿನೇದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗ್ತಲೇ ಇದೆ. ಈ ನಡುವೆ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಸಚಿವ ಸುರೇಶ್ ಕುಮಾರ್ ಅವರು ಭೇಟಿ ನೀಡಿ ಕೋವಿಡ್ ಸೋಂಕಿತರ ಆರೋಗ್ಯ ವಿಚಾರಿಸಿದರು.
ಸ್ವತಃ ಪಿಪಿಇ ಕಿಟ್ ಧರಿಸಿ ಪ್ರತಿಯೊಬ್ಬರ ಬಳಿ ತೆರಳಿ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ್ದಾರೆ. ಬಳಿಕ ಜಿಲ್ಲಾಡಳಿತ ಪೂರೈಸಿರುವ ವ್ಯವಸ್ಥೆಯನ್ನು ಖುದ್ದಾಗಿ ಪರಾಮರ್ಶಿಸಿದ ಸಚಿವರು ಎಲ್ಲ ಜಾಗರೂಕತಾ ಕ್ರಮಗಳ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಯಾವುದೇ ಸಮಸ್ಯೆಗಳಾಗದ ರೀತಿಯಲ್ಲಿ ಕೆಲಸ ಮಾಡಬೇಕೆಂದು ನಿರ್ದೇಶನ ನೀಡಿದರು.
ಇಂದು 167 ಕೋವಿಡ್ ಸೋಂಕಿತರು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 26 ಜನ ವೆಂಟಿಲೇಟರ್ ಮೇಲಿದ್ದಾರೆ. ಐಸಿಯು ವಾರ್ಡ್ ನಲ್ಲಿ 47 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸಚಿವರೇ ಪ್ರತಿಯೊಬ್ಬರನ್ನೂ ಖುದ್ದಾಗಿ ಭೇಟಿ ಮಾಡಿ ಬಂದು ಎಷ್ಟು ದಿನ ಆಯ್ತು? ಅವತ್ತಿಗೂ ಇವತ್ತಿಗೂ ಹೇಗಿದ್ದೀರಿ? ಊಟ ಮಾಡಿದರಾ? ವೈದ್ಯರು ನಿಮ್ಮನ್ನು ಚೆನ್ನಾಗಿ ನೋಡ್ಕೊಳ್ತಿದಾರಾ. ಸಕಾಲಕ್ಕೆ ಆರೈಕೆ ದೊರೆಯುತ್ತಿದೆಯಾ. ಸಮಸ್ಯೆ ಆದ ತಕ್ಷಣ ಪರಿಹಾರಕ್ಕೆ ಪ್ರಯತ್ನ ನಡೀತಿದೆಯಾ. ಎಂದು ಪ್ರಶ್ನಿಸಿ ಎಲ್ಲರನ್ನೂ ಶೀಘ್ರ ಗುಣಮುಖರಾಗಲು ಹಾರೈಸಿದರು.








