ವಿಟ್ಲದಲ್ಲಿ ಯುವಕನ ಕಾಟಕ್ಕೆ ಅಪ್ರಾಪ್ತ ಬಾಲಕಿ ಆತ್ಮಹತ್ಯೆ….
ಯುವಕನೋರ್ವ ಪದೇ ಪದೇ ಪ್ರೀತಿಸು ಎಂದು ಪೀಡಿಸುತ್ತಿದ್ದ ಹಿನ್ನಲೆಯಲ್ಲಿ ಯುವಕನ ಕಾಟ ತಾಳಲಾರದೇ ಅಪ್ರಾಪ್ತ ಬಾಲಕಿಯೊರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಟ್ಲದ ಕನ್ಯಾನ ಗ್ರಾಮದ ಕಾಣಿಯೂರಿನಲ್ಲಿ ನಡೆದಿದೆ. ಮೃತ ಬಾಲಕಿಯನ್ನು 14 ವರ್ಷದ ಆತ್ಮಿಕ ಎಂದು ಗುರುತಿಸಲಾಗಿದೆ.
ಸಾಹುಲ್ ಹಮೀದ್ ಎಂಬ ಮುಸ್ಲಿಂ ಯುವಕ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ, ಈ ಹಿನ್ನೆಲೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದರೆ ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಬಾಲಕಿ ಮನೆಯವರು ಆರೋಪಿಸಿದ್ದಾರೆ.
ತಂದೆ, ತಾಯಿಯನ್ನು ಬಿಟ್ಟು ನನ್ನೊಂದಿಗೆ ಬಾ, ಇಲ್ಲವಾದರೆ ಸಾಯಿ..’ ಎಂದು ಪ್ರೀತಿಸಲು ಒತ್ತಾಯಿಸುತ್ತಿದ್ದ ಅನ್ಯ ಕೋಮಿನ ಯುವಕನ ಪ್ರಚೋದನೆಯೇ ಆತ್ಮಹತ್ಯೆಗೆ ಕಾರಣ ಎಂದು ತಂದೆ ವಿಟ್ಲ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದರ ಜತೆಗೆ, ಸ್ಥಳೀಯ ಬಜರಂಗದಳ ಘಟಕವೂ ಪ್ರಕರಣದ ತನಿಖೆಗೆ ಒತ್ತಾಯಿಸಿದ್ದು, ವಿಟ್ಲ ಸಿಐ ನಾಗರಾಜ್ ನೇತೃತ್ವದಲ್ಲಿ ತನಿಖೆ ಸಾಗಿದೆ.
ವಿಶ್ವ ಹಿಂದೂ ಪರಿಷತ್ತಿನ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ಹುಡುಗಿಯ ಮನೆಗೆ ಹೋಗಿ ಮನೆಯವರಿಗೆ ಸಾಂತ್ವನ ಹೇಳಿದ್ದಾರೆ ಅಲ್ಲದೆ, ಈ ಸಾವಿಗೆ ಕಾರಣವಾದ ಸಾಹುಲ್ ಹಮೀದ್ ಮತ್ತು ಅವನ ಮನೆಯವರನ್ನು ಕೂಡಲೇ ಬಂಧಿಸಿ ಅವರ ಮೇಲೆ ಕೊಲೆ ಮೊಕ್ಕದ್ದಮೆ ದಾಖಲಿಸಿ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.








