ಮಿರ್ಜಾಪುರ್ ವೆಬ್ ಸರಣಿಯ ನಟ ಬ್ರಹ್ಮ ಸ್ವರೂಪ್ ಮಿಶ್ರಾ ನಿಧನ
ಮಿರ್ಜಾಪುರದ ವೆಬ್ ಸರಣಿಯ ನಟ, ಬ್ರಹ್ಮ ಸ್ವರೂಪ್ ಮಿಶ್ರಾ, 36, ಡಿಸೆಂಬರ್ 2, ಗುರುವಾರದಂದು ತನ್ನ ಮುಂಬೈ ನಿವಾಸದಲ್ಲಿ ಸಾವನ್ನಪ್ಪಿದ್ದಾರೆ. ಎದೆನೋವು ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಯಿಂದಾಗಿ ಔಷಧಿಯನ್ನ ಸೇವಿಸಿದ ಎರಡು ದಿನಗಳ ನಂತರ ಶವವಾಗಿ ಪತ್ತೆಯಾಗಿದ್ದಾರೆ. ಫ್ಲಾಟ್ನಿಂದ ದುರ್ವಾಸನೆ ಬರುತ್ತಿದೆ ಎಂದು ನೆರೆಹೊರೆಯವರು ದೂರಿದ ನಂತರ ಪೊಲೀಸರು ನಟನ ಶವವನ್ನು ಅವರ ಸ್ನಾನಗೃಹದಲ್ಲಿ ಪತ್ತೆ ಮಾಡಿದ್ದಾರೆ. ಸಾವಿಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲವಾದರೂ ನಟನಿಗೆ ಹೃದಯಾಘಾತ ಸಂಭವಿಸಿರಬಹುದು ಎಂದು ಪೊಲೀಸರು ಹೇಳಿದ್ದಾರೆ.
ಇತ್ತಿಚೇಗೆ ಸಿನಿಮಾ ತಾರೆಯರಿಗೆ ಹೃದಯಾಘಾತದಂತಹ ಲಕ್ಷಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಈ ಹಿಂದೆ ಬಾಲಿಕಾ ವಧು ತಾರೆ ಸಿದ್ಧಾರ್ಥ್ ಶುಕ್ಲಾ (40), ಪುನೀತ್ ರಾಜ್ಕುಮಾರ್ (46) ರಿಂದ ನಿರ್ದೇಶಕ ರಾಜ್ ಕೌಶಲ್ (50) ವರೆಗೆ ಹಲವಾರು ಸಿನಿಮಾ ಯುವ ಮುಖಗಳು ಹೃದಯ ಸ್ತಂಭನಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ.
ಕಳೆದ 20 ವರ್ಷಗಳಲ್ಲಿ, 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಹೃದಯಾಘಾತವು ಭಾರತದಲ್ಲಿ ದ್ವಿಗುಣಗೊಂಡಿದೆ. 25 ರಷ್ಟು ಹೃದಯಾಘಾತಗಳು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಸಂಭವಿಸುತ್ತಿದೆ. ಹದಗೆಡುತ್ತಿರುವ ಜೀವನಶೈಲಿ ಮತ್ತು ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಅಪಾಯಕಾರಿ ಅಂಶಗಳ ಅಜ್ಞಾನದಿಂದಾಗಿ ಹಠಾತ್ ಸಾವಿಗೆ ಕಾರಣವಾಗುತ್ತಿದೆ.








