ಗೋಕಾಕ್ ನಲ್ಲಿ ಸಂಗೊಳ್ಳಿ ರಾಯಣ್ಣ ಭಾವಚಿತ್ರ ಹರಿದ ಕಿಡಿಗೇಡಿಗಳು – ಸ್ಥಳದಲ್ಲಿ ಬಿಗಿ ಬಂದೋಬಸ್ತ್
ರಾಜ್ಯದಲ್ಲಿ ಸಾವರ್ಕರ್ ಮತ್ತು ಟಿಪ್ಪುಸುಲ್ತಾನ್ ಭಾವಚಿತ್ರ ವಿರೂಪ ಜಟಾಪಟಿ ಮುಗಿಯುವ ಮುನ್ನವೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಭಾವಚಿತ್ರವನ್ನು ಯಾರೋ ಕಿಡಿಗೇಡಿಗಳು ಹರಿದು ಹಾಕಿರುವ ಘಟನೆ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಖನಗಾಂವ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಖನಗಾಂವ ಗ್ರಾಮದ ರಸ್ತೆಗೆ ರಾಯಣ್ಣ ಸರ್ಕಲ್ ಎಂದು ನಾಮಕರಣ ಮಾಡಲಾಗಿತ್ತು. ನಾಮಕರಣ ಮಾಡಿ ರಾಯಣ್ಣ ಭಾವಚಿತ್ರದ ಫ್ಲೆಕ್ಸ್ ಬೋರ್ಡ್ ಹಾಕಲಾಗಿತ್ತು. ಈ ಬೋರ್ಡ್ನಲ್ಲಿದ್ದ ಸಂಗೊಳ್ಳಿ ರಾಯಣ್ಣ ಭಾವಚಿತ್ರವನ್ನು ಯಾರೋ ಕಿಡಿಗೇಡಿಗಳು ತಡರಾತ್ರಿ ಹರಿದು ವಿಕೃತಿ ಮೆರೆದಿದ್ದಾರೆ.
ಕಿಡಿಗೇಡಿಗಳ ಕೃತ್ಯವನ್ನು ಖಂಡಿಸಿ ಗ್ರಾಮದಲ್ಲಿ ರಾಯಣ್ಣ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ. ಟಯರ್ಗೆ ಬೆಂಕಿ ಹಚ್ಚಿ ರಾಯಣ್ಣ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣವಿದೆ. ಗೋಕಾಕ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಗೋಕಾಕ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.