ನಾಪತ್ತೆಯಾಗಿದ್ದ 3 ವರ್ಷದ ಬಾಲಕಿ ದಟ್ಟ ಅರಣ್ಯದಲ್ಲಿ ಪತ್ತೆ
ಬೆಳಗಾವಿ: ನಾಪತ್ತೆಯಾಗಿದ್ದ 3 ವರ್ಷದ ಬಾಲಕಿ ದಟ್ಟ ಅರಣ್ಯದಲ್ಲಿ ಪತ್ತೆಯಾಗಿರುವ ಘಟನೆ ಖಾನಾಪುರ ತಾಲೂಕಿನ ಚಿರೇಖಾನಿ ಗ್ರಾಮದಲ್ಲಿ ನಡೆದಿದೆ.
ಅರಣ್ಯದಲ್ಲಿ ಬಾಲಕಿ ಅದಿತಿ ಮರವೊಂದರ ಕೆಳಗೆ ನಿತ್ರಾಣ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಬಾಲಕಿ ಕೈ ಕಾಲುಗಳಿಗೆ ಇರುವೆಗಳು ಕಚ್ಚಿದ್ದರಿಂದ ನಡೆಯಲಾಗದ ಸ್ಥಿತಿಯಲ್ಲಿ ನಿತ್ರಾಣವಾಗಿ ಬಿದ್ದಿದ್ದಳು. ಸದ್ಯ ಬಲಕಿಯನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ನಡೆದಿದ್ದೇನು:? ಚಿರೇಖಾನಿ ಗ್ರಾಮದ ಅಜ್ಜಿ ಮನೆ ಮುಂದೆ ಆಟವಾಡುತ್ತಿದ್ದ ಅದಿತಿ ಏಕಾಏಕಿ ನಾಪತ್ತೆಯಾಗಿದ್ದಳು. ಅದಿತಿಯನ್ನು ಕುಟುಂಬಸ್ಥರು, ಗ್ರಾಮಸ್ಥರು ಮನೆ ಸುತ್ತಮುತ್ತ, ಅರಣ್ಯದಲ್ಲಿ ಹುಡುಕಿದರು ಪತ್ತೆಯಾಗಿರಲಿಲ್ಲ. ಎರಡು ದಿನಗಳ ಬಳಿಕ ಪೋಷಕರು ಖಾನಾಪುರ ಪೋಲಿಸರಿಗೆ ದೂರು ನೀಡಿದ್ದರು.
ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಪೋಲಿಸರು ಅರಣ್ಯ ಇಲಾಖೆ ಸಹಾಯದೊಂದಿಗೆ, ಸ್ಥಳೀಯ ಯುವಕರ ಸಮೇತ ಅರಣ್ಯದಲ್ಲಿ ಶೋಧ ನಡೆಸಿದ್ದಾರೆ. ಕೊನೆಗೆ ಮನೆಯಿಂದ 2.5 ಕಿಮೀ ದೂರ ಅರಣ್ಯದಲ್ಲಿ ಬಾಲಕಿ ಪತ್ತೆಯಾಗಿದ್ದಾಳೆ. ಮೂರು ದಿನ ಹಗಲು- ರಾತ್ರಿ ದಟ್ಟ ಅರಣ್ಯದಲ್ಲಿದ್ದರು ಬಾಲಕಿ ಸಾವನ್ನು ಗೆದ್ದಿದ್ದಾಳೆ.









