ಬೆಂಗಳೂರು : ರಾಜ್ಯದಲ್ಲಿ ಮೈತ್ರಿ ಸರ್ಕಾರದ ಮೂಲಕ ಅಧಿಕಾರದಲ್ಲಿದ್ದ ಕಾಂಗ್ರೆಸ್ ಗೆ ಆಪರೇಷನ್ ಕಮಲ ಭಾರಿ ಆಘಾತ ನೀಡಿತ್ತು. ಶಾಸಕರ ರಾಜೀನಾಮೆಯಿಂದ ಅಧಿಕಾರದಿಂದ ದೂರ ಉಳಿದ ರಾಜ್ಯ ಕಾಂಗ್ರೆಸ್ ಪಡೆ ಮುಂದಿನ ಚುನಾವಣೆಯಲ್ಲಿ ಕೇಸರಿ ಪಡೆಗೆ ತಕ್ಕ ಪಾಠ ಕಲಿಸುವ ಪಣತೊಟ್ಟಿದೆ. ಅದಕ್ಕಾಗಿ ಈಗಿನಿಂದಲೇ ತಯಾರಿ ಆರಂಭಿಸಿದೆ.
ಆನೆ ತಂದ ಟ್ರಬಲ್ ಶೂಟರ್..!
ವಿಧಾನ ಸಭಾ ಚುನಾವಣೆ, ಲೋಕ ಕದನ, ಮಿನಿ ಸಮರ ಸತತ ಸೋಲುಗಳಿಂದ ಕಂಗೆಟ್ಟ ಕಾಂಗ್ರೆಸ್ ಕಾರ್ಯಕರ್ತರಿಗೆ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಹೊಸ ಚೈತನ್ಯ ತುಂಬುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಸಾರಥಿಯಾಗಿ ಡಿ.ಕೆ ಶಿವಕುಮಾರ್ ಹೆಸರು ಘೋಷಣೆ ಆಗುತ್ತಿದ್ದಂತೆ ಕೈ ಕಲಿಗಳಲ್ಲಿ ಹೊಸ ಹುರುಪು ಬಂದಿರುವುದಂತೂ ನಿಜ..
ಇದರ ಮಧ್ಯೆ ಕೆಪಿಸಿಸಿ ಅಧ್ಯಕ್ಷ ರಾಜ್ಯವನ್ನು ಬಿಜೆಪಿ ಮುಕ್ತ ಕರ್ನಾಟಕವನ್ನಾಗಿ ಮಾಡುವುದಾಗಿ ಈಗಾಗಲೇ ಶಪಥ ಮಾಡಿರೋದು ಎಲ್ಲರಿಗೂ ತಿಳಿದೇ ಇದೆ. ಪ್ರತಿ ಹೆಜ್ಜೆಯಲ್ಲೂ ಬಿಜೆಪಿ ವಿರುದ್ಧ ಬೆಂಕಿಕಾರುತ್ತಿರುವ ರಾಜ್ಯ ಕಾಂಗ್ರೆಸ್ 2023ರ ಚುನಾವಣೆಗಾಗಿ ಎದುರು ನೋಡುತ್ತಿದೆ. ಈ ಚುನಾವಣೆಯಲ್ಲಿ ಕೇಸರಿ ಪಡೆಗೆ ಡಿಚ್ಚಿ ಕೊಡಲು, ಕಾಂಗ್ರೆಸ್ ಕಲಿಗಳು ಕಾದು ಕುಳಿತ್ತಿದ್ದು, ಇದಕ್ಕಾಗಿ ಮಿಷನ್ 2023 ಆರಂಭಿಸಿದ್ದಾರೆ.
2023ರ ಚುನಾವಣೆಯಲ್ಲಿ ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಮಿಷನ್ 2023 ಟಾರ್ಗೆಟ್ ಇಟ್ಟುಕೊಂಡಿದೆ. ಈ ಬಗ್ಗೆ ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮಾಹಿತಿ ನೀಡಿದ್ದಾರೆ. ಇಂದು ಅವರ ಕೆಎ-40 ಎನ್ 2023 ನಂಬರಿನ ಕಾರಿಗೆ ಸ್ಮಶಾನದಲ್ಲಿ ಚಾಲನೆ ನೀಡಲಾಯಿತು. ಈ ವೇಳೆ ಕಾರಿನ ನಂಬರ್ ಬಗ್ಗೆ ಮಾತನಾಡಿದ ಅವರು, ಮಿಷನ್ 2023 ಬಗ್ಗೆ ತಿಳಿಸಿದರು.
ಅವರು ಹೇಳಿದಿಷ್ಟು.. ಮಿಷನ್ 2023 ಟಾರ್ಗೆಟ್ ಇಟ್ಟುಕೊಂಡು ಕಾರಿನ ಸಂಖ್ಯೆ 2023 ಹಾಕಿಕೊಂಡಿದ್ದೇವೆ. ಆ ಸಂಖ್ಯೆ ನೋಡಿದ ತಕ್ಷಣವೇ ಮಿಷನ್ 2023 ನೆನಪಾಗಬೇಕು. ಖಂಡಿತವಾಗಿಯೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ.
ಇಲ್ಲಿ ಸತೀಶ್ ಜಾರಕಿಹೊಳಿ ಅವರ ಮಾತುಗಳನ್ನು ಗಮನಿಸಿದರೇ ರಾಜ್ಯ ಕಾಂಗ್ರೆಸ್ ಮುಂದಿನ 2023ರ ವಿಧಾನಸಭಾ ಚುನಾವಣೆಯನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡಿದ್ದು, ಅಧಿಕಾರಕ್ಕೇ ಬರಲೇ ಬೇಕೆಂಬ ಪಣ ತೊಟ್ಟಿದೆ ಎಂದು ತಿಳಿದು ಬರುತ್ತೆ.
ವರದಿ : ಮಹೇಶ್ ಎಂ ದಂಡು








