ಪರಿಸರ ಸಂರಕ್ಷಣೆಗಾಗಿ ಮಿಷನ್ ಲೈಫ್ ಆಂದೋಲಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ..
ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಜೀವನಶೈಲಿಯನ್ನು ಬದಲಾಯಿಸಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ ನೀಡಿದ್ದಾರೆ. ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಅವರ ಸಮ್ಮುಖದಲ್ಲಿ ಗುಜರಾತ್‌ನ ಏಕತೆಯ ಪ್ರತಿಮೆಯಲ್ಲಿ ಮಿಷನ್ ಲೈಫ್ ಅಭಿಯಾನದ ಚಾಲನೆ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಪಿಎಂ, ಜೀವನಶೈಲಿಯ ಬದಲಾವಣೆಗಳಿಂದ ಹವಾಮಾನ ಬದಲಾವಣೆಯ ತಗ್ಗಿಸುವಿಕೆ ಸಾಧ್ಯ ಎಂದು ಹೇಳಿದರು.
ಹವಾಮಾನ ಬದಲಾವಣೆಯ ಅಪಾಯವನ್ನು ನಿಭಾಯಿಸುವಲ್ಲಿ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದ ಪ್ರಧಾನಿ, ಭಾರತವು ಪರಿಸರ ಸಂರಕ್ಷಣೆಯ ಜೊತೆಗೆ ಬೆಳವಣಿಗೆಗೆ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಹೇಳಿದರು. ಮಹಾತ್ಮಾ ಗಾಂಧಿಯವರ ಟ್ರಸ್ಟಿಶಿಪ್ ಪರಿಕಲ್ಪನೆಯನ್ನು ಸ್ಮರಿಸಿದ ಪ್ರಧಾನಮಂತ್ರಿ, ಮಿಷನ್ ಲೈಫ್ ಪರಿಸರದ ಟ್ರಸ್ಟಿಯಾಗಲು ನಮ್ಮನ್ನು ಪ್ರೋತ್ಸಾಹಿಸುತ್ತದೆ ಎಂದು ಹೇಳಿದರು.
ಹವಾಮಾನ ಬದಲಾವಣೆಯು ಕೇವಲ ಸರ್ಕಾರಗಳು ಕಾಳಜಿ ವಹಿಸಬೇಕಾದ ನೀತಿ-ಸಂಬಂಧಿತ ವಿಷಯವಲ್ಲ ಎಂದು ಮೋದಿ ಒತ್ತಿ ಹೇಳಿದರು. ಹವಾಮಾನ ಬದಲಾವಣೆಯನ್ನು ಎದುರಿಸಲು ಜನರ ಒಟ್ಟಾದ ಪ್ರಯತ್ನಗಳನ್ನು ಅವರು ಒತ್ತಿ ಹೇಳಿದರು. ಮಿಷನ್ ಲೈಫ್ ಪ್ರೊ ಪ್ಲಾನೆಟ್ ಜನರ ಪರಿಕಲ್ಪನೆಯನ್ನು ಬಲಪಡಿಸುತ್ತದೆ ಎಂದು ಪ್ರಧಾನಿ ಹೇಳಿದರು. ನವೀಕರಿಸಬಹುದಾದ ಇಂಧನ ಮತ್ತು ಪರಿಸರ ಸಂರಕ್ಷಣೆಗಾಗಿ ಗುಜರಾತ್ ನ ಪ್ರಯತ್ನಗಳನ್ನು ಮೋದಿ ಶ್ಲಾಘಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರು ಅಭಿವೃದ್ಧಿ ಹೊಂದಿದ ದೇಶಗಳು ತಮ್ಮ ಹವಾಮಾನ ಬದ್ಧತೆಗಳನ್ನು ಪೂರೈಸಲು ಮತ್ತು ಭಾರತದಂತಹ ದೇಶಗಳಿಗೆ ಅರ್ಥಪೂರ್ಣ ಆರ್ಥಿಕ ಮತ್ತು ತಾಂತ್ರಿಕ ಬೆಂಬಲವನ್ನು ನೀಡುವಂತೆ ಒತ್ತಾಯಿಸಿದರು. ಗ್ರಹವನ್ನು ರಕ್ಷಿಸಲು ಪರಿಹಾರಗಳನ್ನು ಹುಡುಕುವಲ್ಲಿ ವ್ಯಕ್ತಿಗಳು ಮತ್ತು ಸಮುದಾಯಗಳ ಭಾಗವಹಿಸುವಿಕೆಯನ್ನು ಅವರು ಒತ್ತಿ ಹೇಳಿದರು.
Mission LiFE: Prime Minister launched the Mission Life movement for environmental protection.