85 ವರ್ಷಗಳಲ್ಲಿ ಇದೇ ಮೊದಲು.. ಮಿಚೆಲ್ ಸ್ಟಾರ್ಕ್ ಸ್ಟ್ರೈಕ್
ಆಶಸ್ ಸರಣಿ ಎಂದರೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಕದನ ಕಲಿಗಳಂತೆ ಮೈದಾನದಲ್ಲಿ ಹೋರಾಡುತ್ತವೆ. ಪರಸ್ಪರ ಪ್ರಾಬಲ್ಯ ಸಾಧಿಸಬೇಕೆಂದು ಉಭಯಗಳು ಪರಿತಪಿಸುತ್ತವೆ.
ಈ ಸರಣಿಯಲ್ಲಿ ಎರಡು ತಂಡಗಳ ಧ್ಯೇಯ ಘೋಷವೊಂದೆ ಅದು ಗೆಲುವು.. ಗೆಲುವು.. ಗೆಲುವು ಮಾತ್ರ.
ಹೌದು..! ಆಶಸ್ ಸರಣಿ ಅಂದ್ರೆ ಅದು ಕೇವಲ ಕ್ರಿಕೆಟ್ ಮಾತ್ರವಲ್ಲ. ಎರಡು ದೇಶಗಳ ಪ್ರತಿಷ್ಠೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು, ವಿಶ್ವಕಪ್ ಗೆಲ್ಲದೇ ಇದ್ದರೂ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ.
ಆದರೆ ಆ್ಯಶಸ್ ಸೋಲನ್ನು ಮಾತ್ರ ಎಂದೂ ಅರಿಗಿಸಿಕೊಳ್ಳುವುದಿಲ್ಲ. ಅಷ್ಟರ ಮಟ್ಟಿಗೆ ಈ ಆ್ಯಶಸ್ ಕರಂಡಿಕೆಯ ಪ್ರತಿಷ್ಠೆ ಇದೆ. ಆ್ಯಶಸ್ ಸೋಲು, ಕೇವಲ ಸೋಲಾಗಿರುವುದಿಲ್ಲ.
ಬದಲಾಗಿ ಅದು ಹೀನಾಯ ಅವಮಾನವಾಗಿರುತ್ತದೆ. ಅದರಲ್ಲೂ ಇಂಗ್ಲೆಂಡ ಮತ್ತು ಆಸ್ಟ್ರೇಲಿಯಾ ತಂಡಗಳು ಆ್ಯಶಸ್ ಸೋಲನ್ನು ಎಂದೂ ಒಪ್ಪಿಕೊಳ್ಳುವುದಿಲ್ಲ.
ಈ ಜಿದ್ದಾಜಿದ್ದಿನ ಹೋರಾಟದ ಸರಣಿ ಇಂದಿನಿಂದ ಆರಂಭವಾಗಿದ್ದು, ಮೊದಲ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ಪ್ರಾಬಲ್ಯ ಸಾಧಿಸಿದೆ.
ಭೋಜನ ವಿರಾಮಕ್ಕೂ ಮುನ್ನವೇ ಆಸೀಸ್ ಬೌಲರ್ಗಳು ಇಂಗ್ಲೆಂಡ್ನ ಟಾಪ್ ಆರ್ಡರ್ ಬ್ಯಾಟರ್ ಗಳನ್ನ ಪೆವಿಲಿಯನ್ ಗೆ ಕಳುಹಿಸಿದ್ದಾರೆ.
ಅದರಲ್ಲೂ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಈ ಪಂದ್ಯದಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ.
ಆಶಸ್ ಸರಣಿಯ ಮೊದಲ ಪಂದ್ಯದ ಮೊದಲ ಎಸೆತದಲ್ಲಿಯೇ ಆಸೀಸ್ ಬೌಲರ್ ಸ್ಟಾರ್ಕ್ , ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ರೋರಿ ಬರ್ನ್ಸ್ ಅವರನ್ನು ಗೋಲ್ಡನ್ ಡಕ್ ಮಾಡಿದ್ದಾರೆ.
ಸ್ಟಾರ್ಕ್ ಎಸೆತವನ್ನು ಸರಿಯಾಗಿ ಅಂದಾಜಿಸದ ರೋರಿ, ಮೊದಲ ಎಸೆತದಲ್ಲಿಯೇ ಕ್ಲೀನ್ ಬೌಲ್ಡ್ ಆಗಿದ್ದಾರೆ.
ಕಳೆದ 85 ವರ್ಷಗಳ ಆಶಸ್ ಇತಿಹಾಸದಲ್ಲಿ ಮೊದಲ ಟೆಸ್ಟ್ನ ಮೊದಲ ಎಸೆತದಲ್ಲಿ ಆಸ್ಟ್ರೇಲಿಯಾದ ವೇಗಿಯೊಬ್ಬರು ವಿಕೆಟ್ ತೆಗೆದುಕೊಂಡಿದ್ದು ಇದು ಎರಡನೇ ಬಾರಿ.
ಇದಕ್ಕೂ ಮೊದಲು 1936ರಲ್ಲಿ ಆಸ್ಟ್ರೇಲಿಯಾದ ವೇಗಿ ಎರ್ನಿ ಮೆಕ್ ಕಾರ್ಮಿಕ್, ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಸ್ಟಾನ್ ವರ್ತಿಂಗ್ಟನ್ ಅವರನ್ನು ಮೊದಲ ಎಸೆತದಲ್ಲಿ ಡಕೌಟ್ ಮಾಡಿದ್ದರು.