38 ಮಡದಿಯರ ಮುದ್ದಿನ ಗಂಡ , 89 ಮಕ್ಕಳ ಪ್ರೀತಿಯ ತಂದೆ , 33 ಮೊಮ್ಮಕ್ಕಳ ಅಜ್ಜ ಇನ್ನಿಲ್ಲ..!
ಮಿಜೋರಾಂ: ಒಬ್ಬ ಹೆಂಡತಿಯನ್ನೇ ಸಂಬಾಳಿಸೋದು ಕಷ್ಟ ಅಂತ ಬಹುತೇಕರು ಗೊಣಗಾಡುತ್ತಾರೆ.. ಅಂತದ್ರಲ್ಲಿ ಈ ವ್ಯಕ್ತಿ ಬರೋಬ್ಬರಿ 38 ಮಹಿಳೆಯರ ಜೊತೆ ಇಷ್ಟು ವರ್ಷ ಸಂಸಾರ ನಡೆಸಿದ್ದಾನೆ.. 89 ಮಕ್ಕಳಿಗೆ ಜನ್ಮ ಕೊಟ್ಟು , 33 ಮೊಮ್ಮಕ್ಕಳ ಅಜ್ಜನಾಗಿದ್ದ ಜಗತ್ತಿನ ಅತಿದೊಡ್ಡ ಕುಟುಂಬದ ವಾರಸ್ದಾರ ಎಂದೇ ಗುರುತಿಸಿಕೊಂಡಿದ್ದ ಜಿಯೋನಾ ಚನಾ ಇಹಲೋಕ ತ್ಯಜಿಸಿದ್ದಾರೆ.
ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಜಿಯೋನ್ರ ಆರೋಗ್ಯ ಇತ್ತೀಚಿಗೆ ಹದಗೆಟ್ಟಿತ್ತು. ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಭಾನುವಾರ ಕೊನೆಯುಸಿರೆಳೆದಿದ್ದಾರೆ. ಪತ್ನಿ, ಮಕ್ಕಳು, ಮೊಮ್ಮಕ್ಕಳು ಸೇರಿ 181 ಸದಸ್ಯರನ್ನ ಹೊಂದಿದ್ದ ಜಿಯೋನಾ ಕುಟುಂಬ ಜಗತ್ತಿಗೆ ಅಚ್ಚರಿಯನ್ನುಂಟುಮಾಡಿತ್ತು. ಮಿಜೋರಾಂನ ಬಕ್ತಾಂಗ್ನಲ್ಲಿ ಜಿಯಾನ್ರ ನಾಲ್ಕಂತಸ್ತಿನ ಬಂಗಲೆ ಇದೆ. ಅಲ್ಲಿಯೇ ಜಿಯೋನಾ ವಾಸವಿದ್ದರು. ಇದು ಪ್ರವಾಸಿಗರ ಆಕರ್ಷಣೆಯ ಕೇಂದ್ರವೂ ಆಗಿತ್ತು.
ಜಿಯೋನ್ರ ಅಜ್ಜ 1942ರಲ್ಲಿ ಹಮಾಂಗ್ಕಾವ್ನ ಹಳ್ಳಿಯಿಂದ ಬಂದು ಐಜಾಲ್ನಲ್ಲಿ ನೆಲೆಸಿದ್ದರು. ಅಂದಿನಿಂದ ಇವರ ಕುಟುಂಬ ಅಲ್ಲೇ ನೆಲೆಸಿದೆ. ಖುವಾಂಗ್ತುಹಾ ಎಂಬ ಪಂಥದಲ್ಲಿ ಬಹುಪತ್ನಿತ್ವ ಪದ್ಧತಿಯಿದೆ. ಹಾಗಾಗಿ ಜಿಯೋನ್ 39 ಮಹಿಳೆಯರನ್ನು ಮದುವೆ ಆಗಿದ್ದರು. ಇದು ಭಾರಿ ಸುದ್ದಿಯಾಗಿತ್ತು.








