ಬೆಳಗಾವಿ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಸಚಿವರು ಕೇವಲ ರಾಜಧಾನಿ ಬೆಂಗಳೂರು ಮತ್ತು ತಮ್ಮ ಸ್ವಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿದ್ದಾರೆ. ಇಂತಹ ಸಂಪುಟ ಸದಸ್ಯರನ್ನು ಇಟ್ಟುಕೊಂಡು ಸಮಗ್ರ ಅಭಿವೃದ್ಧಿ ಸಾಧಿಸಲು ಸಾಧ್ಯವೇ ಎಂದು ಹಿರಿಯ ಶಾಸಕ ಬಿ.ಆರ್. ಪಾಟೀಲ್ ಅವರು ವಿಧಾನಸಭೆಯಲ್ಲಿ ಸ್ವಪಕ್ಷದ ಸರ್ಕಾರದ ವಿರುದ್ಧವೇ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಉತ್ತರ ಕರ್ನಾಟಕದ ಅಭಿವೃದ್ಧಿಯ ಕುರಿತ ಚರ್ಚೆಯ ವೇಳೆ ಆಳಂದ ಶಾಸಕರು ಎತ್ತಿದ ಪ್ರಶ್ನೆಗಳು ಸರ್ಕಾರದ ಕಾರ್ಯವೈಖರಿಯನ್ನು ಪೇಚಿಗೆ ಸಿಲುಕಿಸುವಂತೆ ಮಾಡಿದವು.
ಸಚಿವರ ಕಾರ್ಯವೈಖರಿ ಬಗ್ಗೆ ತೀವ್ರ ಆಕ್ರೋಶ
ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಿ.ಆರ್. ಪಾಟೀಲ್, ಸಚಿವರು ರಾಜ್ಯದ ಮಂತ್ರಿಗಳಾಗಿ ವರ್ತಿಸುತ್ತಿಲ್ಲ, ಬದಲಾಗಿ ಕೇವಲ ತಮ್ಮ ಕ್ಷೇತ್ರದ ಮಂತ್ರಿಗಳಂತೆ ವರ್ತಿಸುತ್ತಿದ್ದಾರೆ ಎಂದು ನೇರ ಆರೋಪ ಮಾಡಿದರು. ಹಿಂದೆ ಎಸ್.ಆರ್.ಬೊಮ್ಮಾಯಿ, ಎ.ಲಕ್ಷ್ಮಿಸಾಗರ್, ನಜೀರ್ ಸಾಬ್ ಅವರಂತಹ ದಿಗ್ಗಜ ನಾಯಕರು ರಸ್ತೆ ಮಾರ್ಗವಾಗಿ ರಾಜ್ಯಾದ್ಯಂತ ಸಂಚರಿಸುತ್ತಿದ್ದರು. ಆ ಮೂಲಕ ಜನರ ಕಷ್ಟಗಳನ್ನು ಅರಿಯುತ್ತಿದ್ದರು. ಆದರೆ ಇಂದಿನ ಮಂತ್ರಿಗಳಿಗೆ ಸಮಯವೇ ಇಲ್ಲದಂತಾಗಿದೆ. ಬೆಂಗಳೂರಿಗೆ ಬರುತ್ತಾರೆ, ಅಲ್ಲಿಂದ ನೇರವಾಗಿ ತಮ್ಮ ಕ್ಷೇತ್ರಗಳಿಗೆ ಓಡುತ್ತಾರೆ. ಇಲಾಖೆ ಮತ್ತು ರಾಜ್ಯ ಎರಡೂ ನಿಮ್ಮ ಜವಾಬ್ದಾರಿಯಲ್ಲವೇ? ಸಂಪುಟಕ್ಕೆ ಸಾಮೂಹಿಕ ಜವಾಬ್ದಾರಿ ಇರಬೇಕಲ್ಲವೇ ಎಂದು ಪ್ರಶ್ನಿಸುವ ಮೂಲಕ ಸಚಿವರ ಕಾರ್ಯವೈಖರಿಗೆ ಚಾಟಿ ಬೀಸಿದರು.
ಉತ್ತರ ಕರ್ನಾಟಕದ ಮೂಲಸೌಕರ್ಯಗಳ ಬಗ್ಗೆ ಧ್ವನಿ ಎತ್ತಿದ ಅವರು, ನಮ್ಮ ಭಾಗದಲ್ಲಿ ನಾಲ್ಕು ಪಥದ ರಸ್ತೆಗಳೇ ಕಾಣಸಿಗುವುದಿಲ್ಲ. ಲೋಕೋಪಯೋಗಿ ಇಲಾಖೆಯ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ. ಇರುವ ರಸ್ತೆಗಳನ್ನಾದರೂ ರಾಷ್ಟ್ರೀಯ ಹೆದ್ದಾರಿಗೆ ಸೇರಿಸಿ ಎಂದು ಗೋಗರೆದರೂ ಪ್ರಯೋಜನವಾಗುತ್ತಿಲ್ಲ. ನಮ್ಮ ಕ್ಷೇತ್ರಗಳಿಂದ ಬೆಂಗಳೂರಿಗೆ ತಲುಪಲು ಸುಸಜ್ಜಿತ ರಸ್ತೆಗಳೇ ಇಲ್ಲದಂತಾಗಿದೆ. ಖಾನಾಪುರ, ಔರಾದ್, ನಿಪ್ಪಾಣಿ, ಬಸವಕಲ್ಯಾಣ, ಗುರುಮಿಠಕಲ್ ಹಾಗೂ ಆಳಂದದಂತಹ ಕ್ಷೇತ್ರಗಳು ರಾಜ್ಯದ ಭೂಪಟದಲ್ಲಿ ಇವೆ ಎಂಬುದು ಹಾಲಿ ಮಂತ್ರಿಗಳಿಗೆ ತಿಳಿದಿದೆಯೇ? ಈ ಕ್ಷೇತ್ರಗಳಿಗೆ ಇದುವರೆಗೂ ಎಷ್ಟು ಜನ ಮಂತ್ರಿಗಳು ಭೇಟಿ ನೀಡಿದ್ದಾರೆ ಎಂದು ಪಾಟೀಲ್ ಸವಾಲು ಹಾಕಿದರು. ಅಭಿವೃದ್ಧಿಯ ಕಲ್ಪನೆ ಇಲ್ಲದ, ರಾಜ್ಯವನ್ನು ಸುತ್ತದ ಸಚಿವರನ್ನು ಇಟ್ಟುಕೊಂಡು ಮುಖ್ಯಮಂತ್ರಿಗಳು ಹೇಗೆ ಸರ್ವಾಂಗೀಣ ಅಭಿವೃದ್ಧಿ ಮಾಡುತ್ತಾರೋ ತಿಳಿಯದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಶೇಷವೆಂದರೆ, ಬಿ.ಆರ್. ಪಾಟೀಲ್ ಅವರು ಸರ್ಕಾರದ ವಿರುದ್ಧ ಈ ಪರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾಗ ಸದನದಲ್ಲಿ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಸಚಿವ ಎಚ್.ಕೆ.ಪಾಟೀಲ್, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಉಪಸ್ಥಿತರಿದ್ದರು. ಆದರೆ ಸ್ವಪಕ್ಷದ ಶಾಸಕರ ಗಂಭೀರ ಆರೋಪಗಳಿಗೆ ಪ್ರತಿಯಾಗಿ ಯಾರೊಬ್ಬರೂ ಒಂದೇ ಒಂದು ಶಬ್ದವನ್ನೂ ಆಡದೆ ಮೌನಕ್ಕೆ ಶರಣಾಗಿದ್ದು ಸದನದಲ್ಲಿ ಅಚ್ಚರಿ ಮೂಡಿಸಿತು.
ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಸಂವಿಧಾನದ 371ಜೆ ಕಲಂ ಅಡಿಯಲ್ಲಿ ವಿಶೇಷ ಸ್ಥಾನಮಾನ ಸಿಕ್ಕಿದ್ದರೂ, ಅದರ ಅನುಷ್ಠಾನದಲ್ಲಿ ಲೋಪಗಳಾಗುತ್ತಿವೆ ಎಂದು ಪಾಟೀಲ್ ಬೇಸರ ವ್ಯಕ್ತಪಡಿಸಿದರು. ಮಲ್ಲಿಕಾರ್ಜುನ ಖರ್ಗೆ ಅವರ ಪ್ರಯತ್ನದಿಂದ ಸಿಕ್ಕ ಈ ಕೊಡುಗೆ ವ್ಯರ್ಥವಾಗಬಾರದು. ಇದರ ಸಮರ್ಪಕ ಜಾರಿಗಾಗಿ ರಾಜಕಾರಣಿಗಳ ಬದಲು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರು, ನಿವೃತ್ತ ಕುಲಪತಿಗಳು ಅಥವಾ ಶಿಕ್ಷಣ ತಜ್ಞರ ನೇತೃತ್ವದಲ್ಲಿ ಸ್ವತಂತ್ರ ಅನುಷ್ಠಾನ ಪ್ರಾಧಿಕಾರ ರಚಿಸಬೇಕು ಎಂದು ಅವರು ಆಗ್ರಹಿಸಿದರು.
ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವುದಾಗಿ ಮುಖ್ಯಮಂತ್ರಿಗಳು ಹೇಳಿಕೆ ನೀಡಿ ಒಂದು ವರ್ಷ ಕಳೆದರೂ ಇನ್ನೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ತೊಗರಿ ಅಭಿವೃದ್ಧಿ ಮಂಡಳಿ ಹೆಸರಿಗಷ್ಟೇ ಇದ್ದು, ಅಲ್ಲಿ ಕಾಯಂ ಸಿಬ್ಬಂದಿ ಇಲ್ಲದಂತಾಗಿದೆ. ರೈತರು ಬಿತ್ತನೆ ಮಾಡುವುದರಿಂದ ಹಿಡಿದು ಮಾರುಕಟ್ಟೆಗೆ ಬೆಳೆ ಬರುವವರೆಗೆ ಮಂಡಳಿ ರೈತರ ಜೊತೆಗಿರಬೇಕು. ಈ ಬಾರಿ ಮುಂಗಾರು ಮತ್ತು ಹಿಂಗಾರು ಎರಡೂ ಕೈಕೊಟ್ಟಿದ್ದು ರೈತರು ಕಂಗಾಲಾಗಿದ್ದಾರೆ. ಕೂಡಲೇ ಕ್ವಿಂಟಲ್ ತೊಗರಿಗೆ 10,000 ರೂಪಾಯಿ ಬೆಂಬಲ ಬೆಲೆ (MSP) ನಿಗದಿಪಡಿಸಬೇಕು ಹಾಗೂ ಮಂಡಳಿಗೆ 500 ಕೋಟಿ ರೂಪಾಯಿಗಳ ಆವರ್ತನಿಧಿ (Revolving Fund) ಸ್ಥಾಪಿಸಬೇಕು ಎಂದು ಬಿ.ಆರ್. ಪಾಟೀಲ್ ಸರ್ಕಾರವನ್ನು ಒತ್ತಾಯಿಸಿದರು.







