ದುಷ್ಟರ ಸಂಹಾರ ಆಗಬೇಕು, ದೇಶಕ್ಕೆ ಒಳ್ಳೆದಾಗಬೇಕು : ಯತ್ನಾಳ್
ಬೆಂಗಳೂರು: ರಾಜ್ಯದಲ್ಲಿ ಹಾಲಿ ಮುಖ್ಯಮಂತ್ರಿ ಜೈಲಿಗೆ ಹೋದ ಉದಾಹರಣೆ ಇದೆ. ಈ ರೀತಿ ಆಗಬಾರದು ಎಂಬುವುದು ನಮ್ಮ ಆಶಯ.
ದುಷ್ಟರ ಸಂಹಾರ ಆಗಬೇಕು. ದೇಶಕ್ಕೆ, ರಾಜ್ಯಕ್ಕೆ, ಪಕ್ಷಕ್ಕೆ ಒಳ್ಳೆಯದಾಗಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರೋಕ್ಷವಾಗಿ ಸಿಎಂ ಬಿಎಸ್ ಯಡಿಯೂರಪ್ಪಗೆ ತಿರುಗೇಟು ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರುಮ, ಪಕ್ಷ ಭ್ರಷ್ಟಾಚಾರ ಸಹಿಸುವುದಿಲ್ಲ ಎಂಬ ಆತ್ಮವಿಶ್ವಾಸ ಇದೆ. ಅದು ಫಲ ಕೊಡುತ್ತದೆ. ದುಷ್ಟರ ಸಂಹಾರ ಆಗಬೇಕು.
ದೇಶಕ್ಕೆ, ರಾಜ್ಯಕ್ಕೆ, ಪಕ್ಷಕ್ಕೆ ಒಳ್ಳೆಯದಾಗಬೇಕು. ರಾಮಾಯಣದಲ್ಲಿ ರಾವಣನ ಸಂಹಾರ ಆಗಬೇಕಾದ್ರೆ ಕಾಲ ಕೂಡಿ ಬರಬೇಕಾಯ್ತು. ಹಾಗೇ ಕೌರವರ ಸಂಹಾರಕ್ಕೂ ಒಂದು ಕಾಲ ಕೂಡಿ ಬಂತು. ಆದಿಲ್ ಶಾಹಿ, ಟಿಪ್ಪು ಸಂತತಿ ಮುಂದೇನಾಯ್ತು?. ಎಲ್ಲದಕ್ಕೂ ಒಂದು ಸಮಯ ಬರುತ್ತದೆ ಎಂದು ಕಿಡಿಕಾರಿದರು.
ಇದೇ ವೇಳೆ ನಾಯಕತ್ವ ಬದಲಾವಣೆ ಇಲ್ಲ ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಯತ್ನಾಳ್, ನಾನು ಮುಖ್ಯಮಂತ್ರಿ ಮಗ ಆಗಿದ್ರೆ ನಾನು ಹಾಗೆ ಹೇಳ್ತಿದ್ದೆ, ರಾಜಕಾರಣದಲ್ಲಿ ಏನೆಲ್ಲಾ ನಡೆಯಲ್ಲ. ರಾಜಕಾರಣದಲ್ಲಿ ಎಲ್ಲವೂ ನಡೆಯುತ್ತದೆ, ಅವರ ಮಗ ಆಗಿರೋದ್ರಿಂದ ಅವರು ಹೇಳ್ತಾರೆ. ಏನೇನೋ ಮಾಡ್ತಾರೆ, ಅದರ ಪರಿಣಾಮ ಮುಂದೆ ಆಗಲಿದೆ ಎಂದರು.









