ದಿವ್ಯಾ ಹಾಗರಗಿ ಮಾಜಿ ಮುಖ್ಯಮಂತ್ರಿಗಳ ಪರಮಾಪ್ತೆ | ಹೊಸ ಬಾಂಬ್ ಸಿಡಿಸಿದ ಯತ್ನಾಳ್
ವಿಜಯಪುರ: ಪಿಎಸ್ಐ ನೇಮಕಾತಿ ವೇಳೆ ಅಕ್ರಮ ಆರೋಪ ಎದುರಿಸುತ್ತಿರುವ ದಿವ್ಯಾ ಹಾಗರಗಿ ಮಾಜಿ ಮುಖ್ಯಮಂತ್ರಿಗಳ ಪರಮಾಪ್ತೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆರೋಪ ಮಾಡಿದ್ದಾರೆ
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ದಿವ್ಯಾ ಅವರ ಹಿಂದೆ ನಿಕಟಪೂರ್ವ ಮುಖ್ಯಮಂತ್ರಿಗಳಿದ್ದಾರೆ. ಈ ಸಂಬಂಧ ಸೂಕ್ತ ತನಿಕೆಯಾಗಬೇಕು. ಪ್ರಕರಣದ ಹಿಂದೆ ಮಾಜಿ ಸಿಎಂ ಆಪ್ತರಿರಲಿ, ಅಥವಾ ಸಿಎಂ ಅವರ ಆಪ್ತರಿಲಿ ಯಾರನ್ನೂ ಸಹ ಬಿಡಬಾರದು ಆರೋಪ ಎದುರಿಸುತ್ತಿರುವವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಿ, ಪ್ರಕರಣದಿಂದಾಗಿ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದರು.
ಇನ್ನೂ ಹುಬ್ಬಳ್ಳಿ ನಡೆದ ಗಲಭೆ ವಿಚಾರವಾಗಿ ಮಾತನಾಡಿದ ಅವರು ಈ ಗಲಭೆ ಹಿಂದೆ ವಿದೇಶಿ ಶಕ್ತಿಗಳ ಕೈವಾಡವಿದೆ. ಅವರಿಗೆ ವಿದೇಶದಿಂದ ಹಣ ಬರುತ್ತದೆ. ಭಟ್ಕಳದ ಒಳಗೆ ಹೋದರೆ ಅಲ್ಲಿಂದ ಹೊರಬರಲು ಆಗದಂತ ವಾತಾವರಣವಿದೆ. ಕಲಬುರಗಿ, ವಿಜಯಪುರದ ಒಂದೊಂದು ಏರಿಯಾದಲ್ಲೂ ಇಂತಹದ್ದೇ ಸ್ಥಿತಿ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಪೊಲೀಸ್ ಇಲಾಖೆ ವರ್ಗಾವಣೆ ವಿಚಾರವಾಗಿ: ಎಸ್ಪಿ ಹಾಗೂ ಡಿಸಿಗಳಿಂದ ಹಣ ತೆಗೆದುಕೊಂಡು ವರ್ಗಾವಣೆ ಮಾಡಿದರೆ ಅವರ ದಕ್ಷತೆ, ಪ್ರಾಮಾಣಿಕತೆ ಹಾಳಾಗುತ್ತದೆ. ಅವರು ಪ್ರಾಮಾಣಿಕವಾಗಿ ಕೆಲಸ ಮಾಡದೇ ಭ್ರಷ್ಟಾಚಾರದಲ್ಲಿ ತೊಡಗುತ್ತಾರೆ. ಓರ್ವ ಡಿಸಿ, ಎಸ್ಪಿಗೆ ಹತ್ತು ಕೋಟಿ ಕೊಡು ಎಂದರೆ ಎಲ್ಲಿಂದ ಕೊಡುತ್ತಾರೆ ಎಂದು ಪ್ರಶ್ನಿಸಿದರು








