ನನಗೆ ಯಾವುದೇ ಅಸಮಾಧಾನ, ಬೇಸರವಿಲ್ಲ : ರಾಮದಾಸ್
ಬೆಂಗಳೂರು : ಸಚಿವ ಸ್ಥಾನದ ವಿಚಾರವಾಗಿ ನನಗೆ ಯಾವುದೇ ಬೇಸರ, ಅಸಮಾಧಾನ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭೇಟಿ ಬಳಿಕ ಶಾಸಕ ರಾಮದಾಸ್ ತಿಳಿಸಿದ್ದಾರೆ.
ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಸಿಗದಿದ್ದಕ್ಕೆ ಶಾಸಕ ರಾಮದಾಸ್ ಬೇಸರಗೊಂಡಿದ್ದಾರೆ ಎಂದು ಹೇಳಲಾಗುತ್ತಿತ್ತು. ಅಲ್ಲದೆ ಮುಖ್ಯಮಂತ್ರಿ ಬೊಮ್ಮಾಯಿ ಮೈಸೂರಿಗೆ ಭೇಟಿ ನೀಡಿದ್ದ ವೇಳೆಯೂ ರಾಮದಾಸ್ ಅವರನ್ನು ಭೇಟಿ ಮಾಡಿರಲಿಲ್ಲ. ಇದು ರಾಮದಾಸ್ ಅಸಮಾಧಾನಗೊಂಡಿರುವುದನ್ನು ಸೂಚಿಸಿತ್ತು. ಅಲ್ಲದೆ ಮೈಸೂರಿಗೆ ಸಿಎಂ ಬಂದಾಗ ಅವರನ್ನು ಯಾಕೆ ಭೇಟಿಯಾಗಿಲ್ಲ ಅನ್ನೋದ್ರ ಬಗ್ಗೆ ಪತ್ರದ ಮೂಲಕ ತಿಳಿಸುತ್ತೇನೆ ಎಂದಿದ್ದರು ರಾಮದಾಸ್.
ಅದರಂತೆ ಇದೀಗ ರಾಮದಾಸ್ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದು, ಸೀಲ್ಡ್ ಕವರ್ ನಲ್ಲಿ ಪತ್ರ ಕೊಟ್ಟಿದ್ದಾರೆ. ಈ ವಿಚಾರವಾಗ ಮಾತನಾಡಿದ ರಾಮದಾಸ್, ಮೈಸೂರಿಗೆ ಸಿಎಂ ಬಂದಿದ್ದಾಗ ನಾನು ಅವರ ಭೇಟಿ ಮಾಡಿರಲಿಲ್ಲ. ಏಕೆ ಭೇಟಿ ಮಾಡಿಲ್ಲವೆಂದು ಸೀಲ್ಡ್ ಕವರ್ ನಲ್ಲಿ ಪತ್ರದ ಮೂಲಕ ಕಾರಣ ಕೊಡುತ್ತೇನೆ ಅಂದಿದ್ದೆ. ಅದರಂತೆ ಇಂದು ಸಿಎಂ ಅವರನ್ನು ಭೇಟಿ ಮಾಡಿ ಕಾರಣ ಕೊಟ್ಟಿದ್ದೇನೆ. ನನಗೆ ಯಾವುದೇ ಅಸಮಾಧಾನ ಇಲ್ಲ. ನಾನು ಬೇಸರ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ಸೀಲ್ಡ್ ಕವರ್ ನಲ್ಲಿ ಕೋವಿಡ್ ವಿಚಾರ, ರಾಜ್ಯ, ಸರ್ಕಾರದ ಹಿತದೃಷ್ಟಿಯಿಂದ ಅನುಭವಗಳನ್ನು ಹಂಚಿಕೊಂಡಿದ್ದೇನೆ. ಬಿಡುವಾದಾಗ ಓದಿ ಅಂತ ಸಿಎಂಗೆ ಹೇಳಿದ್ದೇನೆ ಎಂದರು ತಿಳಿಸಿದರು.









