ಟ್ರಬಲ್ ಶೂಟರ್ ‘ಕೈ’ ಹಿಡಿಯಲಿದ್ದಾರೆ ಶರತ್ ಬಚ್ಚೇಗೌಡ!?
ಬೆಂಗಳೂರು : ಕಾಂಗ್ರೆಸ್ ಸೇರಲಿದ್ದಾರಾ ಪಕ್ಷೇತರ ಎಂಎಲ್ ಎ ಶರತ್ ಬಚ್ಚೇಗೌಡ..? ಸದ್ಯ ರಾಜಕೀಯ ಪಡಸಾಲೆಯಲ್ಲಿ ಗಿರಗಿಟ್ಟಲೇ ಹೊಡೆಯುತ್ತಿರುವ ಪ್ರಶ್ನೆ ಇದು. ಇದಕ್ಕೆ ಪುಷ್ಠಿ ನೀಡುವಂತೆ ಹೊಸಕೋಟೆ ಕ್ಷೇತ್ರದಿಂದ ಕ್ಷೇತ್ರದಿಂದ ಬ್ರೇಕಿಂಗ್ ನ್ಯೂಸ್ ವೊಂದು ಹೊರಬಿದ್ದಿದೆ.
ಅದೇನಂದರೇ ಶೀಘ್ರದಲ್ಲಿಯೇ ಶರತ್ ಬಚ್ಚೇಗೌಡ ಕಾಂಗ್ರೆಸ್ ಗೆ ಸೇರಲಿದ್ದಾರಂತೆ. ಶರತ್ ಬಚ್ಚೇಗೌಡ ಡಿ. ಕೆ. ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಕ್ಷೇತ್ರದಲ್ಲಿ ಹರಿದಾಡುತ್ತಿವೆ. ಶರತ್ ಬಚ್ಚೇಗೌಡ ಜೊತೆಗೆ ಚುನಾವಣೆಯಲ್ಲಿ ಕೆಲಸ ಮಾಡಿದ ಯುವಕರೇ ಈ ಮಾತನ್ನು ಹೇಳುತ್ತಿರೋದು ಶರತ್ ಕೈ ಸೇರೋದು ಪಕ್ಕಾ ಎನ್ನಲಾಗುತ್ತಿದೆ.
ಶರತ್ ಬಚ್ಚೇಗೌಡರಿಗೆ ಬಿಜೆಪಿಯ ಬಾಗಿಲು ಕ್ಲೋಸ್!
ಉಪಚುನಾವಣೆಯಲ್ಲಿ ಪಕ್ಷದ ನಾಯಕರ ಮಾತನ್ನ ಧಿಕ್ಕರಿಸಿ ಶರತ್ ಬಚ್ಚೇಗೌಡ ಎಂಟಿಬಿ ವಿರುದ್ಧ ಅಖಾಡಕ್ಕಿಳಿದರು. ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಿಂತು 81,671 ಮತಗಳನ್ನು ಪಡೆದು ಎಂಟಿಬಿ ನಾಗರಾಜ್ಗೆ ಸೋಲಿನ ರುಚಿ ತೋರಿಸಿದರು. ಇದರಿಂದಾಗಿ ಬಿಜೆಪಿ ನಾಯಕರು ಶರತ್ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಅಲ್ಲದೆ ಪಕ್ಷಕ್ಕೆ ಯಾರೇ ಬರುತ್ತೇವೆ ಎಂದರೂ ಎಂಟಿಬಿ ಅವರನ್ನು ಬಿಟ್ಟು ಯಾವುದೇ ತೀರ್ಮಾನ ಮಾಡುವುದಿಲ್ಲ. ಅವರ ತೀರ್ಮಾನವೇ ಅಂತಿಮ” ಎಂದು ಸಚಿವ ಆರ್. ಅಶೋಕ ಹೇಳಿದ್ದಾರೆ. ಹೀಗಾಗಿ ಶರತ್ ಬಚ್ಚೇಗೌಡ ಅವರಿಗೆ ಬಿಜೆಪಿ ಬಾಗಿಲು ಬಹುತೇಕ ಮುಚ್ಚಿದೆ.
ಅಖಾಡದಲ್ಲಿ ಟ್ರಬಲ್ ಶೂಟರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮುಂದಿನ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಅದರಲ್ಲೂ ಯುವಕರನ್ನು ಪಕ್ಷಕ್ಕೆ ಸೆಳೆಯಲು ಡಿಕೆಶಿ ಪ್ಲಾನ್ ಮಾಡಿಕೊಳ್ಳುತ್ತಿದ್ದು, ಅದರ ಭಾಗವಾಗಿಯೇ ಹೊಸಕೋಟೆಯಲ್ಲಿ ಯುವಕರ ಬೆಂಬಲ ಇರುವ ಶರತ್ ಬಚ್ಚೇಗೌಡರನ್ನು ಪಕ್ಷಕ್ಕೆ ಕರೆತರು ಮುಂದಾಗಿದ್ದಾರೆ ಎನ್ನಲಾಗಿದೆ.
ಅಲ್ಲದೆ ಎಂಟಿಬಿ ನಾಗರಾಜ್ ಕಾಂಗ್ರೆಸ್ ತೊರೆದಿರುವುದರಿಂದ ಹೊಸಕೋಟೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗಟ್ಟಿಗೊಳಿಸುವ ಜವಾಬ್ದಾರಿ ಕಾಂಗ್ರೆಸ್ ಅಧ್ಯಕ್ಷರಾಗಿ ಡಿಕೆಶಿ ಮೇಲಿದೆ. ಆದ್ದರಿಂದ, ಶರತ್ ಬಚ್ಚೇಗೌಡರನ್ನು ಕರೆತಂದು ಯುವಕರ ಬೆಂಬಲ ಪಡೆದು ಪಕ್ಷ ಗಟ್ಟಿಗೊಳಿಸುವ ತಂತ್ರ ಡಿ. ಕೆ. ಶಿವಕುಮಾರ್ ಅವರದ್ದಾಗಿದೆ.








