ಮೈಸೂರು: ಬೆಂಗಳೂರಿನ ಕೆ.ಜಿ.ಹಳ್ಳಿಯಲ್ಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಶಾಸಕ ತನ್ವೀರ್ ಸೇಠ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದಲ್ಲಿ ಗುಪ್ತಚರ ಇಲಾಖೆ ತುಂಬಾ ವೀಕ್ ಆಗಿದೆ. ಮುಂದೆ ಏನಾಗಲಿದೆ ಅನ್ನುವು ಗುಪ್ತಚರ ಇಲಾಖೆಗೆ ಗೊತ್ತಿರಬೇಕು. ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿದರೆ ಅನೇಕ ಪ್ರಾಣ ಹಾನಿ ಆಗುತ್ತೆ. ಗುಪ್ತಚರ ಇಲಾಖೆ ವೈಫಲ್ಯದಿಂದ ಶಾಂತಿ ಕದಡಿದೆ. ಇಂತಹ ಸೂಕ್ಷ್ಮ ವಿಚಾರಗಳಲ್ಲಿ ಗುಪ್ತಚರ ಇಲಾಖೆ ಆಕ್ಟೀವ್ ಆಗಿರಬೇಕಿತ್ತು ಎಂದು ತನ್ವೀರ್ ಸೇಠ್ ಗುಪ್ತಚರ ಇಲಾಖೆ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ.
ಇನ್ನೂ ಮುಂದುವರೆದು ಮಾತನಾಡಿರುವ ಅವರು ಮೊದಲು ನಾವು ಶಾಂತಿ ಕಾಪಾಡಿಕೊಳ್ಳೋಣ. ಗಲಭೆ ಸಂಬಂಧ ಎಲ್ಲಿ ವೈಫಲ್ಯಗಳು ಆಗಿವೆ ಅನ್ನೋದನ್ನ ತನಿಖೆ ಮಾಡಲು ಸರ್ಕಾರವನ್ನ ಒತ್ತಾಯಿಸುತ್ತೇನೆ. ರಾಮ ಮಂದಿರ ಭೂಮಿ ಪೂಜೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಕೋಮು ಗಲಭೆ ಪ್ರಚೋದಿತ ಪೋಸ್ಟ್ಗಳನ್ನ ಹಾಕಲಾಗುತ್ತಿದೆ. ಇತ್ತೀಚೆಗೆ ಇದರಿಂದ ಕೆಟ್ಟ ಸಂಸ್ಕೃತಿ ಬೆಳೆಯುತ್ತಿದೆ. ಆಳುವ ಸರ್ಕಾರಗಳು ಉದ್ಯೋಗ ಸೃಷ್ಠಿ ಮಾಡಬೇಕು. ದುಡಿಯುವ ಕೈಗಳಿಗೆ ಕೆಲಸ ನೀಡಿದಾಗ ಇಂತಹ ಘಟನೆಗಳನ್ನ ತಡೆಯಬಹುದು. ಕೇಂದ್ರ ಸರ್ಕಾರ ಈಗಾಗಲೇ ಅನೇಕ ಆಪ್ಗಳನ್ನ ನಿಷೇಧ ಮಾಡಿದೆ. ಇನ್ನಷ್ಟು ಆಪ್ ನಿಷೇಧ ಮಾಡಬೇಕು ಎನ್ನುವ ಮೂಲಕ ಫೇಸ್ಬುಕ್ ನಿಷೇಧಕ್ಕೆ ಪರೋಕ್ಷವಾಗಿ ಒತ್ತಾಯಿಸಿದ್ದಾರೆ.
ಅಲ್ಲದೇ ಇತ್ತೀಚೆಗೆ ಆನ್ಲೈನ್ ಕ್ಲಾಸ್ ಬಂದು ಎಲ್ಲರ ಕೈಯಲ್ಲಿ ಮೊಬೈಲ್ ಇದೆ. ಇದರಿಂದ ಹೊರಗಿನ ವಾತವರಣ ಮತ್ತಷ್ಟು ಹಾಳಾಗುತ್ತಿದೆ. ಯುವಕರು ಶಾಂತಿ ಕಾಪಾಡಬೇಕು. ಗಲಭೆ ಸಂಬಂಧ ಅಖಂಡ ಶ್ರೀನಿವಾಸ್ ಮೂರ್ತಿ ಈಗಾಗಲೇ ಕ್ಷಮೆ ಕೇಳಿದ್ದಾರೆ. ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಆಗಲೇಬೇಕು. ಯುವಕರು ವಾಕ್ ಸ್ವಾತಂತ್ರ್ಯವನ್ನ ಸೋಷಿಯಲ್ ಮೀಡಿಯಾಗಳಲ್ಲಿ ದುರ್ಬಳಕೆ ಮಾಡಿಕೊಳ್ಳಬಾರದು. ಜಾತಿ ವ್ಯವಸ್ಥೆಯಲ್ಲಿ ಸಮಾಜ ಇಬ್ಬಾಗ ಮಾಡುವುದು ಬೇಡ ಎಂದು ಕಿವಿ ಮಾತು ನೀಡಿದ್ದಾರೆ.








