ಶಾಸಕ ಸಿ.ಟಿ. ರವಿ ಅವರ ಬಂಧನ ಮತ್ತು ಅವರ ಮೇಲೆ ನಡೆದ ಘಟನೆಗಳು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಪೊಲೀಸರು ಅವರನ್ನು ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿರುವುದು ಜನರಲ್ಲಿ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.
ಶಾಸಕ ಸಿ.ಟಿ.ರವಿ ಅವರನ್ನು ಪೊಲೀಸರು ಕಬ್ಬಿನ ಗದ್ದೆಗೆ ಕರೆದುಕೊಂಡು ಹೋದರು. ಸೇಫ್ಟಿ ದೃಷ್ಟಿಯಿಂದ ಕೆಲವರು ಕಾಡು, ಕ್ವಾರಿಗಳಲ್ಲಿ ಅಡಗಿ ಕುಳಿತುಕೊಳ್ಳುತ್ತಾರೆ. ಪೊಲೀಸರು ಹೊಸ ಸೇಫ್ಟಿ ಮಾರ್ಗ ಹುಡುಕಿದ್ದಾರೆ. ಮುಖ್ಯಮಂತ್ರಿ ಹಾಗೂ ಸಚಿವರನ್ನು ಸುರಕ್ಷತೆ ದೃಷ್ಟಿಯಿಂದ ಕಬ್ಬಿನ ಗದ್ದೆಗೆ ಅಥವಾ ಕ್ವಾರಿಗೆ ಕರೆದುಕೊಂಡು ಹೋಗುವುದು ಉತ್ತಮ ಎಂದು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಸಿ.ಟಿ. ರವಿ ಅವರು ನಕ್ಸಲ್ ಪ್ರದೇಶದಿಂದ ಬಂದವರು. ಅವರಿಗೆ ನಕ್ಸಲ್ ಸಂಘಟನೆಗಳಿಂದ ಬೆದರಿಕೆಗಳಿವೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದರೂ ಅವರನ್ನು, ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿದ್ದಾರೆ. ಅವರಿಗೆ ನಕ್ಸಲರು ಗುಂಡು ಹೊಡೆಯಲಿ ಎಂಬ ಕಾರಣಕ್ಕೆ ಅಲ್ಲಿಗೆ ಕರೆದುಕೊಂಡು ಹೋದರೇ? ಈ ಪ್ರಕರಣವನ್ನು ಸದನದ ಒಳಗೆ ಬಗೆಹರಿಸಬೇಕಿತ್ತು. ಅದನ್ನು ಬಿಟ್ಟು ಎಲ್ಲೋ ಪ್ರಕರಣ ದಾಖಲಿಸಿ ರಾತ್ರಿಯೆಲ್ಲಾ ಬಸ್ನಲ್ಲಿ ಸುತ್ತಾಡಿಸಲಾಗಿದೆ. ಹೀಗೆ ಬಂಧಿಸಿದ ಪೊಲೀಸ್ ಅಧಿಕಾರಿ ವಿರುದ್ಧ ಬಿಜೆಪಿ ಹೋರಾಟ ಮಾಡಲಿದೆ. ಬಂಧನ ಬಳಿಕ ಪೊಲೀಸ್ ಅಧಿಕಾರಿಗಳು ಫೋನ್ನಲ್ಲಿ ನಿರಂತರವಾಗಿ ಮಾತನಾಡುತ್ತಿದ್ದರು. ಒಬ್ಬ ವಿಧಾನಪರಿಷತ್ ಸದಸ್ಯನಿಗೆ ಸುರಕ್ಷತೆ ಕೊಡಲು ಸಾಧ್ಯವಾಗದ ಸರ್ಕಾರ, ಅಪರಾಧಿಗಳಿಂದ ಜನರನ್ನು ಹೇಗೆ ಕಾಪಾಡುತ್ತದೆ?
ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.