ಬೆಳಗಾವಿ: ಗಡಿಜಿಲ್ಲೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದ ಕಾವು ಏರುತ್ತಿರುವ ಸಂದರ್ಭದಲ್ಲೇ, ಆಡಳಿತರೂಢ ಕಾಂಗ್ರೆಸ್ ಪಕ್ಷದ ಆಂತರಿಕ ವಲಯದಲ್ಲಿ ಮತ್ತೊಂದು ರಾಜಕೀಯ ಬಿರುಗಾಳಿ ಎದ್ದಿದೆ. ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ತೆರೆಮರೆಯಲ್ಲಿ ನಡೆಯುತ್ತಿರುವಾಗಲೇ, ವಿಧಾನಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಅವರ ಸಾಮಾಜಿಕ ಜಾಲತಾಣದ ಪೋಸ್ಟ್ ಒಂದು ವಿವಾದದ ಕಿಡಿಯನ್ನು ಹೊತ್ತಿಸಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಎಂದು ಸಂಬೋಧಿಸುವ ಮೂಲಕ ಹಟ್ಟಿಹೊಳಿ ಅವರು, ಕಾಂಗ್ರೆಸ್ ಪಾಳಯದಲ್ಲಿ ನಡೆಯುತ್ತಿರುವ ಶೀತಲ ಸಮರಕ್ಕೆ ತುಪ್ಪ ಸುರಿದಂತಾಗಿದೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಹೋದರರೂ ಆಗಿರುವ ಚನ್ನರಾಜ್ ಹಟ್ಟಿಹೊಳಿ ಅವರ ಈ ನಡೆ, ಕೇವಲ ಸಾಮಾಜಿಕ ಜಾಲತಾಣದ ನಿರ್ವಾಹಕರ ಎಡವಟ್ಟೇ ಅಥವಾ ಡಿಕೆಶಿ ಶಿಷ್ಯ ಬಳಗದ ಮನದಾಳದ ಮಾತು ಹೊರಬಂದಿದೆಯೇ ಎಂಬ ಬಿಸಿಬಿಸಿ ಚರ್ಚೆ ರಾಜಕೀಯ ಮೊಗಸಾಲೆಯಲ್ಲಿ ಜೋರಾಗಿದೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ನಿನ್ನೆ ಪಾಲ್ಗೊಳ್ಳಲು ಕೆಪಿಸಿಸಿ ಅಧ್ಯಕ್ಷರೂ ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಅವರನ್ನು ಸ್ವಾಗತಿಸಲು ವಿಧಾನಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ತೆರಳಿದ್ದರು. ಸ್ವಾಗತದ ನಂತರ, ಈ ಕುರಿತಾದ ಫೋಟೋಗಳನ್ನು ಹಟ್ಟಿಹೊಳಿ ಅವರ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು.
ಆದರೆ, ಫೋಟೋ ಕೆಳಗಿನ ಸಾಲುಗಳಲ್ಲಿ ಬರೆದ ಒಕ್ಕಣೆ ಎಲ್ಲರ ಹುಬ್ಬೇರಿಸುವಂತೆ ಮಾಡಿತು. ಅದರಲ್ಲಿ, ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳಲು ಬೆಳಗಾವಿಗೆ ಆಗಮಿಸಿರುವ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್ ಅವರನ್ನು ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಾಯಿತು ಎಂದು ಬರೆಯಲಾಗಿತ್ತು. ಕೇವಲ ಕೆಲವೇ ನಿಮಿಷಗಳಲ್ಲಿ ಈ ಪೋಸ್ಟ್ ವೈರಲ್ ಆಗಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿತು.
ಬೆಂಕಿಯಿಲ್ಲದೆ ಹೊಗೆಯಾಡುವುದಿಲ್ಲವೇ?
ಸದ್ಯ ರಾಜ್ಯ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಬಣಗಳ ನಡುವೆ ಅಧಿಕಾರ ಹಂಚಿಕೆಯ ಸೂತ್ರದ ಬಗ್ಗೆ ಗುಸುಗುಸು ಕೇಳಿಬರುತ್ತಿದೆ. ಎರಡುವರೆ ವರ್ಷಗಳ ನಂತರ ಸಿಎಂ ಬದಲಾವಣೆ ಆಗಲಿದೆ ಎಂಬ ಮಾತುಗಳು, ದಲಿತ ಸಿಎಂ ಕೂಗು ಮತ್ತು ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರ ಹೇಳಿಕೆಗಳು ಈ ಬೆಂಕಿಗೆ ತುಪ್ಪ ಸುರಿಯುತ್ತಲೇ ಇವೆ. ಇಂತಹ ಸೂಕ್ಷ್ಮ ಸಮಯದಲ್ಲಿ, ಡಿಕೆಶಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಹಾಗೂ ಪ್ರಭಾವಿ ಸಚಿವೆಯ ಸಹೋದರರಾಗಿರುವ ಚನ್ನರಾಜ್ ಹಟ್ಟಿಹೊಳಿ ಅವರ ಖಾತೆಯಿಂದ ಇಂತಹದೊಂದು ಸಂದೇಶ ರವಾನೆಯಾಗಿರುವುದು ಅಷ್ಟು ಸರಳವಾಗಿ ತಳ್ಳಿಹಾಕುವ ವಿಷಯವಲ್ಲ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಇದು ಕೇವಲ ಟೈಪಿಂಗ್ ಮಿಸ್ಟೇಕ್ ಎಂದು ಹೇಳಲಾಗುತ್ತಿದ್ದರೂ, ಡಿಕೆಶಿ ಅವರನ್ನು ಸಿಎಂ ಕುರ್ಚಿಯಲ್ಲಿ ನೋಡಬೇಕೆಂಬ ಅವರ ಬೆಂಬಲಿಗರ ಉತ್ಕಟ ಆಸೆ ಅರಿವಿಲ್ಲದೇ ಹೀಗೆ ಹೊರಬಂದಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅಧಿವೇಶನ ಮುಗಿದ ಕೂಡಲೇ ನಾಯಕತ್ವ ಬದಲಾವಣೆಯ ಕಸರತ್ತು ಜೋರಾಗಲಿದೆ ಎಂಬ ಊಹಾಪೋಹಗಳಿಗೆ ಈ ಘಟನೆ ಮತ್ತಷ್ಟು ಪುಷ್ಠಿ ನೀಡಿದೆ.
ಡ್ಯಾಮೇಜ್ ಕಂಟ್ರೋಲ್ ಗೆ ಇಳಿದ ಸಚಿವೆ ಹೆಬ್ಬಾಳ್ಕರ್
ತಮ್ಮನ ಪೋಸ್ಟ್ ಪಕ್ಷದೊಳಗೆ ಮುಜುಗರ ಮತ್ತು ಗೊಂದಲ ಸೃಷ್ಟಿಸುತ್ತಿದ್ದಂತೆ ಎಚ್ಚೆತ್ತುಕೊಂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ತಕ್ಷಣವೇ ಸಮಜಾಯಿಷಿ ನೀಡುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದರು.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ದಯಮಾಡಿ ಯಾರೂ ಇದನ್ನು ತಪ್ಪಾಗಿ ಭಾವಿಸಬಾರದು ಮತ್ತು ರಾಜಕೀಯವಾಗಿ ಬಳಸಿಕೊಳ್ಳಬಾರದು. ಸೋಷಿಯಲ್ ಮೀಡಿಯಾ ಹ್ಯಾಂಡಲ್ ಮಾಡುವ ಹುಡುಗರಿಂದ ಆದ ಸಣ್ಣ ಪ್ರಮಾದವಿದು. ಮಾನವ ಸಹಜ ತಪ್ಪುಗಳಿಗೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ. ನಾನು ಮತ್ತು ನನ್ನ ಸಹೋದರ ಇಬ್ಬರೂ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಗಳು. ಪಕ್ಷ ಮತ್ತು ಹೈಕಮಾಂಡ್ ತೀರ್ಮಾನಕ್ಕೆ ನಾವು ಸದಾ ಬದ್ಧ ಎಂದು ಸ್ಪಷ್ಟಪಡಿಸಿದ್ದಾರೆ.
ಮುಂದೇನು?
ಸದ್ಯಕ್ಕೆ ವಿವಾದಿತ ಪೋಸ್ಟ್ ಅಳಿಸಿ ಹಾಕಲಾಗಿದ್ದರೂ, ಸ್ಕ್ರೀನ್ ಶಾಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವಿರೋಧ ಪಕ್ಷಗಳು ಇದನ್ನು ಅಸ್ತ್ರವಾಗಿ ಬಳಸಿಕೊಳ್ಳುವ ಸಾಧ್ಯತೆಯಿದ್ದು, ಕಾಂಗ್ರೆಸ್ ಮನೆಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಬಿಂಬಿಸಲು ಇದು ಹೊಸ ಸರಕಾಗಿದೆ. ಒಟ್ಟಿನಲ್ಲಿ, ಬೆಳಗಾವಿ ಚಳಿಗಾಲದ ಅಧಿವೇಶನವು ಜನಪರ ಸಮಸ್ಯೆಗಳ ಚರ್ಚೆಗಿಂತ ಹೆಚ್ಚಾಗಿ, ನಾಯಕತ್ವ ಬದಲಾವಣೆಯ ಗೊಂದಲದ ಗೂಡಾಗಿ ಮಾರ್ಪಡುತ್ತಿದೆಯೇ ಎಂಬ ಅನುಮಾನ ಈ ಘಟನೆಯಿಂದ ಬಲವಾಗಿದೆ.








