ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆಯುವಂತೆ ಕೋರಿ ಅಮಿತ್ ಶಾಗೆ ಎಂಎನ್‌ಎಸ್ ಪತ್ರ
ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕುವಂತೆ ಒತ್ತಾಯಿಸಿ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದೆ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನ ಮಧ್ಯಪ್ರವೇಶವನ್ನೂ ಅವರು ಕೋರಿದ್ದಾರೆ.
ಇದಕ್ಕೂ ಮೊದಲು, ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಮಹಾರಾಷ್ಟ್ರ ಸರ್ಕಾರಕ್ಕೆ ಗಡುವು ನಿಡಿದ್ದಾರೆ. ಮೇ 3ರೊಳಗೆ ಸರ್ಕಾರ ಕ್ರಮಕೈಗೊಳ್ಳುವಂತೆ, ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕಬೇಕು ಎಂದು ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದರು.
ಮಂಗಳವಾರ ಥಾಣೆಯಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ರಾಜ್ ಠಾಕ್ರೆ, ಶಿವಸೇನೆ ನೇತೃತ್ವದ ರಾಜ್ಯ ಸರ್ಕಾರವು ಮೇ 3 ರ ಮೊದಲು ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕದಿದ್ದರೆ, ಎಂಎನ್ಎಸ್ ಕಾರ್ಯಕರ್ತರು ಮಸೀದಿಗಳ ಮುಂದೆ ಹನುಮಾನ್ ಚಾಲೀಸಾವನ್ನು ಆಡುತ್ತಾರೆ ಎಂದು ಹೇಳಿದರು.
ಈ ತಿಂಗಳ ಆರಂಭದಲ್ಲಿ, ರಾಜ್ ಠಾಕ್ರೆ ಅವರು ರಾಜ್ಯ ಸರ್ಕಾರವು ಮಸೀದಿಗಳಿಂದ ಎಲ್ಲಾ ಧ್ವನಿವರ್ಧಕಗಳನ್ನು ತೆಗೆದುಹಾಕಬೇಕು ಎಂದ ಒತ್ತಾಯಿಸಿದರು. ಅದು ಇತರರಿಗೆ ತೊಂದರೆ ಉಂಟುಮಾಡುತ್ತದೆ ಎಂದು ಆರೋಪಿಸಿದರು. ನಾವು ಯಾವುದೇ ಪ್ರಾರ್ಥನೆಗೆ ವಿರುದ್ಧವಾಗಿಲ್ಲ, ಆದರೆ ಜನರು ತಮ್ಮ ನಿವಾಸಗಳಲ್ಲಿ ಅವರ ನಂಬಿಕೆಯನ್ನು ಅನುಸರಿಸಬೇಕು ಮತ್ತು ಇತರರಿಗೆ ತೊಂದರೆ ನೀಡಬಾರದು ಎಂದು ಅವರು ಹೇಳಿದ್ದಾರೆ.








