ಮೊಬೈಲ್ ಸ್ಫೋಟಗೊಂಡು ತಾಯಿ ಮತ್ತು ಇಬ್ಬರು ಮಕ್ಕಳ ದಾರುಣ ಸಾವು
ಕರೂರು, ಅಗಸ್ಟ್ 11: ಆಘಾತಕಾರಿ ಘಟನೆಯೊಂದರಲ್ಲಿ, ತಾಯಿ ಮತ್ತು ಇಬ್ಬರು ಮಕ್ಕಳು ತಮ್ಮ ಮನೆಯಲ್ಲಿ ಮೊಬೈಲ್ ಸ್ಫೋಟಗೊಂಡು ಸಾವನ್ನಪ್ಪಿದ್ದಾರೆ. ಈ ಘಟನೆ ತಮಿಳುನಾಡಿನ ಕರೂರಿನಲ್ಲಿ ವರದಿಯಾಗಿದೆ.
29 ರ ಹರೆಯದ ಮುತ್ತುಲಕ್ಷ್ಮಿ ಚಾರ್ಜ್ ಗೆ ಇಟ್ಟಿದ್ದ ಮೊಬೈಲ್ ನಲ್ಲಿ ಮಾತನಾಡುತ್ತಿದ್ದರು. ಫೋನ್ ಕರೆಯ ಸಂಪರ್ಕ ಕಡಿತಗೊಳಿಸಿದ ಬಳಿಕ ಮೊಬೈಲ್ ಸ್ಫೋಟಗೊಂಡಿದೆ ಎಂದು ವರದಿಯಾಗಿದೆ. ಸ್ಪೋಟದಿಂದ ಮುತ್ತುಲಕ್ಷ್ಮಿಗೆ ಬೆಂಕಿ ಹಿಡಿದಿದ್ದು, ಅವರ ಮೂರು ಮತ್ತು ಎರಡು ವರ್ಷ ವಯಸ್ಸಿನ ಮಕ್ಕಳು ಹೊಗೆಯಿಂದ ಉಸಿರುಕಟ್ಟಿ ಮೃತಪಟ್ಟಿದ್ದಾರೆ. ಮೂವರನ್ನು ಆಸ್ಪತ್ರೆಗೆ ಸಾಗಿಸಿದರೂ ಅವರು ಅಷ್ಟರಲ್ಲಿ ಮೃತಪಟ್ಟಿದ್ದರು ಎನ್ನಲಾಗಿದೆ.

ಮಹಿಳೆ ಮತ್ತು ಅವರ ಪತಿ ಬಾಲಕೃಷ್ಣನ್ (31) ಆರು ವರ್ಷಗಳ ಹಿಂದೆ ವಿವಾಹವಾಗಿದ್ದು, ಕಳೆದ ಕೆಲವು ವರ್ಷಗಳಿಂದ ಕರೂರಿನಲ್ಲಿ ನೆಲೆಸಿದ್ದರು. ದಂಪತಿಗಳು ಸಣ್ಣ ಹೋಟೆಲ್ ಅನ್ನು ನಡೆಸುತ್ತಿದ್ದು, ಸಾಲ ಹೆಚ್ಚಾದ ಕಾರಣ ಬಾಲಕೃಷ್ಣನ್ ಕುಟುಂಬವನ್ನು ತ್ಯಜಿಸಿದ್ದರು ಎನ್ನಲಾಗಿದೆ.
ಮುತ್ತುಲಕ್ಷ್ಮಿ ಕುಟುಂಬವನ್ನು ಒಂಟಿಯಾಗಿ ನೋಡಿಕೊಳ್ಳುತ್ತಿದ್ದು, ಕೊರೋನವೈರಸ್ ಸಾಂಕ್ರಾಮಿಕ ರೋಗವು ಅವರ ಆದಾಯದ ಮೇಲೆ ಪರಿಣಾಮ ಬೀರಿತ್ತು ಎನ್ನಲಾಗಿದೆ. ಈ ಕುರಿತು ಪೊಲೀಸ್ ತನಿಖೆ ನಡೆಯುತ್ತಿದೆ.








