ಮೈಸೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಹಾಗೂ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಇಡೀ ಪ್ರಕರಣದ ಪೊಲೀಸ್ ತನಿಖೆಯ ಬಗ್ಗೆ ತಮಗೆ ಸಂಪೂರ್ಣ ವಿಶ್ವಾಸವಿದೆ ಎಂದು ಸ್ಪಷ್ಟಪಡಿಸುವ ಮೂಲಕ ವಿರೋಧಿಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ಕುಮಾರಸ್ವಾಮಿ ನಿವಾಸದಲ್ಲಿ ಆರೋಪಿಯ ಮೊಬೈಲ್ ನೆಟ್‌ವರ್ಕ್ ಪತ್ತೆ
ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖಾ ಪ್ರಗತಿಯ ಕುರಿತು ಮಹತ್ವದ ವಿಚಾರವನ್ನು ಪ್ರಸ್ತಾಪಿಸಿದ ಸಚಿವ ಯತೀಂದ್ರ ಸಿದ್ದರಾಮಯ್ಯ, ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಯೊಬ್ಬರ ಮೊಬೈಲ್ ನೆಟ್‌ವರ್ಕ್ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ನಿವಾಸದಲ್ಲಿ ಪತ್ತೆಯಾಗಿರುವುದಾಗಿ ತನಿಖೆಯಿಂದ ತಿಳಿದುಬಂದಿದೆ ಎಂದು ಸ್ವತಃ ಪೊಲೀಸ್ ಆಯುಕ್ತರೇ ಮಾಹಿತಿ ನೀಡಿರುವುದಾಗಿ ಹೇಳಿದರು. ಪೊಲೀಸ್ ಕಮಿಷನರ್ ಅವರು ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ತನಿಖೆ ಪ್ರಗತಿಯಲ್ಲಿದ್ದು, ಈ ಸ್ಟಿಂಗ್ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿಸಿದವರ ಮೊಬೈಲ್ ಕುಮಾರಸ್ವಾಮಿ ಅವರ ಮನೆಯಲ್ಲಿ ಟ್ರೇಸ್ ಆಗಿದೆ ಎಂಬ ಆಘಾತಕಾರಿ ಸಂಗತಿಯನ್ನು ಯತೀಂದ್ರ ಅವರು ಒತ್ತಿ ಹೇಳಿದರು.
ತೇಜೋವಧೆಗೆ ಯತ್ನಿಸಿದವರ ವಿರುದ್ಧವೂ ಕಠಿಣ ಕ್ರಮವಾಗಲಿ
ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವ ಕುರಿತು ವಿಶ್ವಾಸ ವ್ಯಕ್ತಪಡಿಸಿದ ಅವರು, ಸರ್ಕಾರದ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ಈ ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಾಗಿದ್ದರೂ ಅವರ ವಿರುದ್ಧ ಸರ್ಕಾರ ಕಾನೂನು ಪ್ರಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು. ಕೇವಲ ಸ್ಟಿಂಗ್ ಆಪರೇಷನ್ ನಡೆಸಿದವರಷ್ಟೇ ಅಲ್ಲದೆ, ಆ ವಿಡಿಯೋವನ್ನು ಬೇಕು ಬೇಕು ಎಂದೇ ಉದ್ದೇಶಪೂರ್ವಕವಾಗಿ ಹರಡಿ ರಾಜಕೀಯವಾಗಿ ತೇಜೋವಧೆ ಮಾಡಲು ಪ್ರಯತ್ನಿಸಿದವರ ಮೇಲೂ ಕಾನೂನು ಕ್ರಮ ಜರುಗಿಸಬೇಕು ಎಂದು ಯತೀಂದ್ರ ಅವರು ಇದೇ ವೇಳೆ ತೀವ್ರವಾಗಿ ಒತ್ತಾಯಿಸಿದರು. ಇನ್ನು ಪ್ರಕರಣದ ಸುತ್ತ ನಡೆಯುತ್ತಿರುವ ರಾಜಕೀಯ ಕೆಸರೆರಚಾಟದ ಕುರಿತು ಪ್ರತಿಕ್ರಿಯಿಸಿದ ಅವರು, ಯಾವುದೇ ಒಬ್ಬ ರಾಜಕಾರಣಿಯ ಮೇಲೆ ಆರೋಪ ಕೇಳಿಬಂದಾಗ ಅದು ಸಹಜವಾಗಿಯೇ ರಾಜಕೀಯಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.







