ಸಾರ್ಕ್ ರಾಷ್ಟ್ರಗಳಲ್ಲಿ ಕೊರೊನಾ ವೈರಸ್ ನಿಯಂತ್ರಣ ಮತ್ತು ಮುನ್ನೆಚ್ಚರಿಕಾ ಕ್ರಮಗಳಿಗೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ಕ್ ರಾಷ್ಟ್ರಗಳ ನಾಯಕರ ವಿಡಿಯೋ ಕಾನ್ಫೆರೆನ್ಸ್ ಸಭೆ ನಡೆಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇದರಲ್ಲಿ ಭಾಗಹಿಸಿದ್ದ ಸಾರ್ಕ್ ನಾಯಕರಿಗೆ ಸಭೆಯ ಉದ್ದೇಶವನ್ನು ಪ್ರಾರಂಭದಲ್ಲಿ ಮನವರಿಕೆ ಮಾಡಿಕೊಟ್ಟರು.
ನಂತರ ಒಂದೊಂದೇ ಸಾರ್ಕ್ ದೇಶದ ನಾಯಕರು ತಮ್ಮ ಅಭಿಪ್ರಾಯ, ಸಲಹೆ, ತಮ್ಮಲ್ಲಿ ತೆಗೆದು ಕೊಂಡಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಮತ್ತು ತಮ್ಮ ದೇಶದಲ್ಲಿ ಕೊರೊನಾ ವೈರಸ್ ಪರಿಸ್ಥಿತಿಯನ್ನು ತೆರೆದಿಟ್ಟರು.
ಈ ವಿಡಿಯೋ ಕಾನ್ಫೆರೆನ್ಸ್ ನಲ್ಲಿ ಮಾಲ್ಡೀವ್ ಅಧ್ಯಕ್ಷ ಇಬ್ರಾಹಿಂ ಮುಹಮ್ಮದ್ ಸೊಲಿಹ್, ಶ್ರೀಲಂಕಾ ಪ್ರಧಾನ ಮಂತ್ರಿ ಗೊಟಬಯ ರಾಜಪಕ್ಷೆ, ಭೂತಾನ್ ಪ್ರಧಾನಿ ಲೋಟೆ ತ್ಶೆರಿಂಗ್, ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ, ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಮತ್ತು ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಭಾಗವಹಿಸಿದ್ದು, ಪಾಕಿಸ್ಥಾನಿ ಪ್ರಧಾನಿ ಇಮ್ರಾನ್ ಖಾನ್ ಅವರು ಭಾಗವಹಿಸಿರಲಿಲ್ಲ. ಇಮ್ರಾನ್ ಖಾನ್ ಅವರ ಬದಲು ಪಾಕಿಸ್ತಾನದ ಆರೋಗ್ಯ ಸಚಿವ ಜಾಫರ್ ಮಿರ್ಜಾ ಅವರು ವಿಡಿಯೋ ಕಾನ್ಫೆರೆನ್ಸ್ ನಲ್ಲಿ ಭಾಗಿಯಾಗಿದ್ದರು.
ಭಾರತದಲ್ಲಿ 150ಕ್ಕಿಂತಲೂ ಕಡಿಮೆ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಆದರೂ ನಾವು ಹೆಚ್ಚು ಜಾಗೃತರಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಜಾಗೃತರಾಗಿ, ಆತಂಕಗೊಳ್ಳಬೇಡಿ ಎಂಬ ಹೇಳಿಕೆಯ ಮೂಲಕ ಕೊರೊನಾ ವೈರಸ್ ವಿರುದ್ಧ ಹೋರಾಡಲು ಭಾರತ ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಾರ್ಕ್ ರಾಷ್ಟ್ರಗಳ ನಾಯಕರಿಗೆ ವಿವರಿಸಿದರು.
ಪ್ರಧಾನಿ ಮೋದಿ ಸೇರಿದಂತೆ ಸಾರ್ಕ್ ರಾಷ್ಟ್ರಗಳ ನಾಯಕರು ವೈರಸ್ ಸಂಶೋಧನಾ ಕೇಂದ್ರಗಳ ಸ್ಥಾಪನೆ, ಪರಸ್ಪರ ಮಾಹಿತಿ ವಿನಿಮಯ ಸೇರಿದಂತೆ ಹಲವಾರು ಸಲಹೆಗಳನ್ನು ಈ ವಿಡಿಯೋ ಕಾನ್ಫೆರೆನ್ಸ್ ನಲ್ಲಿ ಹಂಚಿಕೊಂಡರು.
ಪಾಕಿಸ್ತಾನದ ಆರೋಗ್ಯ ಸಚಿವ ಜಾಫರ್ ಮಿರ್ಜಾ ಅವರು, ಭಾರತ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿ ನಾವು ಕೊರೋನಾ ವೈರಸ್ ಸಂಬಂಧ ಯಾವುದೇ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲೂ ಕೊರೋನಾ ವೈರಸ್ ಸೋಂಕು ಪ್ರಕರಣಗಳು ದಾಖಲಾಗಿದ್ದು ಅಲ್ಲಿ ತುರ್ತು ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಲ್ಲಿನ ನಿರ್ಬಂಧವನ್ನು ತೆಗೆದರೆ ಸಹಾಯವಾಗುತ್ತದೆ ಎಂದು ಹೇಳಿದರು. ಪಾಕಿಸ್ತಾನದ ಆರೋಗ್ಯ ಸಚಿವರ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೌನ ವಹಿಸುವ ಮೂಲಕ ತಿರುಗೇಟು ನೀಡಿದರು. ನರೇಂದ್ರ ಮೋದಿ ಅವರು ಪಾಕಿಸ್ತಾನದ ಈ ಹೇಳಿಕೆಗೆ ಯಾವುದೇ ಪ್ರತ್ಯುತ್ತರ ನೀಡದೆ ಸುಮ್ಮನಿದ್ದರು.
ಇತ್ತೀಚೆಗಷ್ಟೇ ಶಸ್ತ್ರಚಿಕಿತ್ಸೆಗೊಳಗಾಗಿ ಇದೀಗ ಚೇತರಿಸಿಕೊಳ್ಳುತ್ತಿರುವ ನೇಪಾಳದ ಪ್ರಧಾನ ಮಂತ್ರಿ ಕೆ.ಪಿ. ಶರ್ಮಾ ಒಲಿ ಅವರು ಕೂಡ ಸಭೆಯಲ್ಲಿ ಭಾಗವಹಿಸಿದ್ದು, ಈ ಸಭೆಯನ್ನು ಆಯೋಜಿಸಿದ್ದಕ್ಕಾಗಿ ಸಾರ್ಕ್ ರಾಷ್ಟ್ರಗಳ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದರು.








