ಚೆನ್ನೈ : ಲಡಾಕ್ ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾದ ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ದೇಶದೆಲ್ಲೆಡೆ ಈ ಬಗ್ಗೆ ಚರ್ಚೆ ನಡೆಯುತ್ತಿದ್ದು, ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸುತ್ತಾ ಚೀನಾ ವಿರುದ್ಧ ಬುಸ್ ಬುಸ್ ಎನ್ನುತ್ತಿದ್ದಾರೆ. ಇದರ ಮಧ್ಯೆ ಹುತಾತ್ಮ ಯೋಧರ ಹಾಗೂ ಮೋದಿ ಬಗ್ಗೆ ಐಪಿಎಲ್ ಫ್ರ‍್ಯಾಂಚೈಸ್ ಚೆನ್ನೈ ಸೂಪರ್ ಕಿಂಗ್ಸ್ ಯ ಡಾ.ಮಧು ತೊಟ್ಟಪ್ಪಿಲಿಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆ ಅವರನ್ನು ಸಿಎಸ್ ಕೆ ಅಮಾನತುಗೊಳಿಸಿದೆ.
ಡಾ.ಮಧು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿ ಟ್ವೀಟ್ ಮಾಡಿದ್ದು, ‘ಶವಪೆಟ್ಟಿಗೆಯಲ್ಲಿ ಪ್ರಧಾನಿ ಕೇರ್ಸ್ ಸ್ಟಿಕ್ಕರ್ ಗಳು ಇವೆಯೇ ಎಂದು ತಿಳಿಯಲು ನನಗೆ ಕುತೂಹಲವಿದೆ’ ಎಂದು ಬರೆದುಕೊಂಡಿದ್ದಾರೆ. ಈ ಹಿನ್ನೆಲೆ ಸಿಎಸ್ ಕೆ ತಕ್ಷಣಕ್ಕೆ ಜಾರಿಗೆ ಬರುವಂತೆ ತಂಡದಿಂದ ಅವರನ್ನು ಅಮಾನತುಗೊಳಿಸಿದೆ.
ಅಲ್ಲದೆ ಈ ವಿಚಾರವಾಗಿ ಸಿಎಸ್ ಕೆ ಟ್ವೀಟ್ ಮಾಡಿದ್ದು, ‘ಡಾ.ಮಧು ಅವರ ವೈಯಕ್ತಿಕ ಟ್ವೀಟ್ ವಿಚಾರ ನಮಗೆ ತಿಳಿದಿರಲಿಲ್ಲ. ಅವರನ್ನು ತಂಡದ ವೈದ್ಯರ ಹುದ್ದೆಯಿಂದ ಅಮಾನತುಗೊಳಿಸಲಾಗಿದೆ. ಮ್ಯಾನೇಜ್ಮೆಂಟ್ ಗೆ ಹೇಳದೆ ಅವರು ಮಾಡಿದ ಟ್ವೀಟ್ ಗೆ ಸಿಎಸ್ ಕೆ ವಿಷಾದಿಸುತ್ತದೆ’ ಎಂದು ತಿಳಿಸಿದೆ.








