ನವದೆಹಲಿ; ಜಾಗತಿಕ ಹೆಮ್ಮಾರಿ ಕೊರೊನಾ ವೈರಸ್ ಸೋಂಕನ್ನ ಸಮರ್ಥವಾಗಿ ನಿಭಾಯಿಸಿದ ಜಾಗತಿಕ ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿಯವರು ಅಗ್ರ ಸ್ಥಾನ ಪಡೆದಿರುವುದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೋದಿಯವರನ್ನು ಕೊಂಡಾಡಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಕೊರೊನಾ ವೈರಸ್ ಹಾವಳಿಯನ್ನು ಸಮರ್ಥವಾಗಿ ನಿಭಾಯಿಸಿದ ವಿಶ್ವ ನಾಯಕರ ಪಟ್ಟಿಯನ್ನು ಅಮೆರಿಕಾದ ಮಾರ್ನಿಂಗ್ ಕನ್ಸಲ್ಟ್ ಎಂಬ ಸಂಸ್ಥೆ ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ಪ್ರಧಾನಿ ಮೋದಿಯವರು ಅಗ್ರಸ್ಥಾನ ಪಡೆದಿದ್ದರು. ಈ ಸಂತಸದ ಸಂಗತಿಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಂಚಿಕೊಂಡಿದ್ದರು. ಇದೀಗ ಈ ಸಮೀಕ್ಷಾ ವರದಿಯನ್ನು ಆಧರಿಸಿ ಅಮಿತ್ ಶಾ ಅವರು ಮೋದಿಯವರ ನಾಯಕತ್ವವನ್ನು ಕೊಂಡಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅಮಿತ್ ಶಾ, “ಸತ್ಯ ಸ್ವಯಂ ಸಾಕ್ಷಿ…ದೇಶ ಸಮರ್ಥ ನಾಯಕತ್ವದ ಅಡಿಯಲ್ಲಿ ಮುನ್ನುಗ್ಗುತ್ತಿರುವುದಕ್ಕೆ ಈ ಸಮೀಕ್ಷಾ ವರದಿಯೇ ಸಾಕ್ಷಿ. ಸತ್ಯಕ್ಕೆ ಯಾವುದೇ ಸಾಕ್ಷಿಗಳನ್ನೂ ಒದಗಿಸುವ ಅವಶ್ಯಕತೆ ಇರುವುದಿಲ್ಲ. ಖುದ್ದು ಸತ್ಯವೇ ಸಾಕ್ಷಿಯಾಗಿದೆ. ಕೊರೊನಾ ವೈರಸನ್ನು ಪ್ರಧಾನಿ ಮೋದಿ ನಿರ್ವಹಿಸುತ್ತಿರುವ ರೀತಿಯನ್ನು ಇಡೀ ವಿಶ್ವವೇ ಮೆಚ್ಚಿಕೊಂಡಿದೆ. ಮೋದಿ ಕೇವಲ ಭಾರತ ಮಾತ್ರವಲ್ಲದೇ, ಇಡೀ ವಿಶ್ವ ಸಮುದಾಯದ ಆರೋಗ್ಯದ ರಕ್ಷಣೆಯಲ್ಲಿ ನಿರತರಾಗಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ಭಾರತೀಯನೂ ಸುರಕ್ಷತೆಯ ಭಾವನೆ ಅನುಭವಿಸುತ್ತಿರುವುದಕ್ಕೆ ಪ್ರಧಾನಿ ಮೋದಿಯವರ ಪರಿಣಾಮಕಾರಿ ನೀತಿಗಳೇ ಕಾರಣ” ಎಂದಿದ್ದಾರೆ.
ಕೊರೊನಾ ವೈರಸ್ ಎಂಬ ಮಾರಕ ವೈರಾಣುವನ್ನು ಹಿಮ್ಮೆಟ್ಟಿಸಲು ಇಡೀ ಭಾರತ ಒಂದಾಗಿರುವುದರಲ್ಲಿ ಸಂಶಯವೇ ಇಲ್ಲ ಎಂದಿರುವ ಅಮಿತ್ ಶಾ, ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತ ಈ ಸಂಕಷ್ಟದಿಂದ ಪಾರಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.








