ಭಾರತಕ್ಕೆ ಬಂದಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ತೆಗೆದುಕೊಂಡಿದ್ದ ಒಂದು ಸೆಲ್ಫಿ ಈಗ ಅಮೆರಿಕದ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಫೋಟೋವನ್ನು ಅಮೆರಿಕದ ಪ್ರತಿನಿಧಿ ಸಭೆಯ ಸದಸ್ಯೆ ಸಿಡ್ನಿ ಕಫ್ಲಾಗರ್ ಡೋವ್ ತೀವ್ರ ಟೀಕೆಗೆ ಬಳಸಿಕೊಂಡಿದ್ದಾರೆ.
ಅವರು, ಟ್ರಂಪ್ ಆಡಳಿತದ ನೀತಿಗಳು ಭಾರತ–ಅಮೆರಿಕ ಸಂಬಂಧಗಳನ್ನು ಹಾಳುಮಾಡುತ್ತಿವೆ. ಭಾರತವನ್ನು ದೂರ ಸರಿಸಿದರೆ ಅದರಿಂದ ಅಮೆರಿಕಕ್ಕೆ ದೊಡ್ಡ ನಷ್ಟವಾಗುತ್ತದೆ ಎಂದು ಹೇಳಿದ್ದಾರೆ. ಭಾರತ ಒಂದು ಪ್ರಮುಖ ಕಾರ್ಯತಂತ್ರದ ಪಾಲುದಾರವಾಗಿರುವಾಗ, ಟ್ರಂಪ್ ಸರ್ಕಾರ ತೆಗೆದುಕೊಳ್ಳುತ್ತಿರುವ ಹಠಾತ್ ನಿರ್ಧಾರಗಳು ರಾಷ್ಟ್ರದ ವಿದೇಶಾಂಗ ನೀತಿಗೆ ಹಾನಿಯಾಗುತ್ತಿವೆ ಎಂಬುದು ಅವರ ಆರೋಪ.
ಈ ರೀತಿಯ ನೀತಿಗಳಿಂದ ಟ್ರಂಪ್ ಅವರಿಗೆ ಯಾವುದೇ ನೋಬೆಲ್ ಪ್ರಶಸ್ತಿ ಸಿಗುವುದಿಲ್ಲ ಎಂದು ಕಟುವಾಗಿ ಟೀಕಿಸಿದ ಅವರು, ರಾಜಕೀಯ ವಲಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದ್ದಾರೆ.
ಮೋದಿ–ಪುಟಿನ್ ಸೆಲ್ಫಿ ಭಾರತ–ರಷ್ಯಾ ಸ್ನೇಹದ ಬಲವನ್ನು ತೋರಿಸುತ್ತಿದ್ದರೂ, ಅದೇ ಫೋಟೋ ಈಗ ಅಮೆರಿಕದ ರಾಜಕೀಯದಲ್ಲಿ ಉದ್ವಿಗ್ನತೆ ಸೃಷ್ಟಿಸಿರುವುದು ವಿಶೇಷ.








