ಲಾಕ್ ಡೌನ್ ಟೈಮ್ ನಲ್ಲಿ ಹಳೆಯ ದಿನಗಳನ್ನು ನೆನಪಿಸಿಕೊಂಡ ಮಹಮ್ಮದ್ ಅಜರುದ್ದೀನ್
ಮಹಮ್ಮದ್ ಅಜರುದ್ದೀನ್.. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ. ಮೂರು ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಅಜರುದ್ದೀನ್ ಅವರು ಸ್ಟೈಲೀಶ್ ಕ್ರಿಕೆಟಿಗ ಕೂಡ ಹೌದು. ತನ್ನ ಕೈಯ ಮಣಿಕಟ್ಟಿನಿಂದಲೇ ಬ್ಯಾಟ್ – ಚೆಂಡಿನ ಜೊತೆ ಸರಸವಾಡುತ್ತಿದ್ದ ಅಜರುದ್ದೀನ್ ಕಲಾತ್ಮಕ ಬ್ಯಾಟ್ಸ್ ಮೆನ್ ಎಂಬುದರಲ್ಲಿ ಎರಡು ಮಾತಿಲ್ಲ. ಆದ್ರೆ ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಸಿಲುಕಿ ತನ್ನ ವರ್ಣರಂಜಿತ ಕ್ರಿಕೆಟ್ ಬದುಕಿಗೆ ಕಪ್ಪುಚುಕ್ಕೆಯನ್ನಿಟ್ಟುಕೊಂಡಿದ್ದರು.
ಆನಂತರ ಸಂಸದರಾಗಿದ್ದ ಅಜರುದ್ದೀನ್ ಈಗ ಹೈದ್ರಬಾದ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ,
ಕೊರೋನಾ ವೈರಸ್ ನಡುವೆಯೂ ಅಜರುದ್ದೀನ್ ಅವರು ಹೈದ್ರಬಾದ್‍ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದಾರೆ. ಎಂದಿನಂತೆ ತಲೆಗೊಂದು ಕ್ಯಾಪ್, ಶಾಟ್ಸ್ -ಟಿ-ಶರ್ಟ್ ಹಾಕೊಂಡು ತನ್ನ ಸಿಗ್ನೇಚರ್ ಸ್ಟೈಲ್‍ನ ಬ್ಯಾಟಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಕೈಯ ಮಣ್ಣಿಕಟ್ಟಿನೊಂದಿಗೆ ಬ್ಯಾಟಿಂಗ್ ಮಾಡುತ್ತಿರುವ ವಿಡಿಯೋವನ್ನು ತನ್ನ ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿದ್ದಾರೆ. ಸ್ಕ್ವೇರ್ ಕಟ್, ಫ್ಲಿಕ್ಸ್ ಹಾಗೂ ಬ್ಯಾಕ್ ಫೂಟ್‍ನೊಂದಿಗೆ ಬ್ಯಾಟಿಂಗ್ ಮಾಡುತ್ತಿರುವ ದೃಶ್ಯಗಳನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಈ ವಿಡಿಯೋ ನೋಡಿದಾಗ ಅಜರುದ್ದೀನ್ ಅವರು ಭಾರತದ ಪರ ಆಡುತ್ತಿರುವ ಆಟವನ್ನು ನೆನಪು ಮಾಡುಂತಿದೆ.
ಅಜರುದ್ದೀನ್ ಅವರು 47 ಟೆಸ್ಟ್ ಹಾಗೂ 174 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನೆಡೆಸಿದ್ದಾರೆ. ಇದ್ರಲ್ಲಿ 14 ಟೆಸ್ಟ್ ಪಂದ್ಯ ಹಾಗೂ 90 ಏಕದಿನ ಪಂದ್ಯಗಳನ್ನು ತನ್ನ ನಾಯಕತ್ವದಲ್ಲಿ ಭಾರತಕ್ಕೆ ಜಯ ತಂದಿದ್ದಾರೆ. 57ರ ಹರೆಯದ ಅಜರುದ್ದೀನ್ ಅವರು 1999ರ ನಂತರ ಭಾರತ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಒಟ್ಟು 99 ಟೆಸ್ಟ್ ಪಂದ್ಯಗಳನ್ನು ಆಡಿರುವ ಅಜರುದ್ದೀನ್, 6215 ರನ್ ದಾಖಲಿಸಿದ್ದಾರೆ. ಇದ್ರಲ್ಲಿ 22 ಶತಕಗಳಿವೆ. ಹಾಗೇ 21 ಅರ್ಧಶತಕಗಳಿವೆ. ಇನ್ನು ಏಕದಿನ ಪಂದ್ಯಗಳಲ್ಲಿ 9378 ರನ್ ಗಳಿಸಿದ್ದಾರೆ. ಇದ್ರಲ್ಲಿ ಏಳು ಶತಕ ಹಾಗೂ 58 ಅರ್ಧಶತಕಗಳಿವೆ.








