ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನಂತರ ದೇಶದ ನಾಯಕತ್ವ ಯಾರ ಕೈ ಸೇರಲಿದೆ? ಮೋದಿ ತಮ್ಮ ಉತ್ತರಾಧಿಕಾರಿಯನ್ನು ಯಾವಾಗ ಘೋಷಿಸುತ್ತಾರೆ? ಎಂಬ ಚರ್ಚೆಗಳು ರಾಷ್ಟ್ರ ರಾಜಕೀಯದಲ್ಲಿ ಮತ್ತೆ ಮುನ್ನಲೆಗೆ ಬಂದಿವೆ. ಇದೀಗ ಸ್ವತಃ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ಈ ಕುರಿತು ಮಹತ್ವದ ಹೇಳಿಕೆ ನೀಡುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ನಗರದಲ್ಲಿ ನಡೆದ ಆರ್‌ಎಸ್‌ಎಸ್ ದೃಷ್ಟಿಕೋನ ಮತ್ತು ಮುಂದಿನ ದಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮೋಹನ್ ಭಾಗವತ್, ಪ್ರಧಾನಿ ಮೋದಿಯವರ ಉತ್ತರಾಧಿಕಾರಿ ಆಯ್ಕೆ ವಿಚಾರದಲ್ಲಿ ಸಂಘದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಮೋದಿ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವವರು ಯಾರು?
ನರೇಂದ್ರ ಮೋದಿ ಅವರ ನಂತರ ಉತ್ತರಾಧಿಕಾರಿ ಯಾರು ಎನ್ನುವ ಕುತೂಹಲಕಾರಿ ಪ್ರಶ್ನೆಗೆ ಉತ್ತರಿಸಿದ ಮೋಹನ್ ಭಾಗವತ್, ಈ ನಿರ್ಧಾರದಲ್ಲಿ ಆರ್‌ಎಸ್‌ಎಸ್ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮೋದಿಯ ನಂತರ ಯಾರು ಎನ್ನುವ ಪ್ರಶ್ನೆಗೆ ನಾನು ಅಥವಾ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಉತ್ತರಿಸಲು ಸಾಧ್ಯವಿಲ್ಲ. ಅದನ್ನು ಖುದ್ದು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರೇ ನಿರ್ಧರಿಸಬೇಕು. ಮುಂದಿನ ದಿನಗಳಲ್ಲಿ ನೂತನವಾಗಿ ಆಯ್ಕೆಯಾಗುವ ನಾಯಕನಿಗೆ ನಾನು ಕೇವಲ ಶುಭ ಹಾರೈಸಬಲ್ಲೆ ಹೊರತು, ಆಯ್ಕೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಜಾಣ್ಮೆಯ ಉತ್ತರ ನೀಡಿದ್ದಾರೆ.
ಕಳೆದ ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿಯವರು 75ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬಿಜೆಪಿಯಲ್ಲಿ 75 ವರ್ಷ ತುಂಬಿದ ನಾಯಕರು ಚುನಾವಣಾ ರಾಜಕೀಯದಿಂದ ನಿವೃತ್ತರಾಗಬೇಕು ಅಥವಾ ಮಾರ್ಗದರ್ಶಕ ಮಂಡಳಿಗೆ ಸರಿಯಬೇಕು ಎಂಬ ಅಲಿಖಿತ ನಿಯಮವಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿವೆ. ಹೀಗಾಗಿ ಮೋದಿ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುತ್ತಾರೆಯೇ ಎಂಬ ಚರ್ಚೆ ಜೋರಾಗಿತ್ತು.
ಈ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ, 75 ವರ್ಷ ತುಂಬಿದವರು ಇತರರಿಗೆ ಅವಕಾಶ ಮಾಡಿಕೊಡಬೇಕು ಎಂದು ಭಾಗವತ್ ಹೇಳಿದ್ದಾರೆ ಎನ್ನಲಾದ ಸುದ್ದಿ ವೈರಲ್ ಆಗಿತ್ತು. ಆದರೆ ಈ ಬಗ್ಗೆಯೂ ಸ್ಪಷ್ಟನೆ ನೀಡಿರುವ ಭಾಗವತ್, 75 ವರ್ಷ ತುಂಬಿದವರು ನಿವೃತ್ತಿ ಆಗಬೇಕೆಂದು ತಾವೆಂದೂ ಹೇಳಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ, ಬಿಜೆಪಿಯಲ್ಲಿ ಅಂತಹ ಯಾವುದೇ ಕಡ್ಡಾಯ ನಿವೃತ್ತಿ ನಿಯಮವಿಲ್ಲ ಎಂದು ಹೇಳುವ ಮೂಲಕ ಊಹಾಪೋಹಗಳನ್ನು ತಳ್ಳಿಹಾಕಿದ್ದರು.
ಸಾಮಾನ್ಯವಾಗಿ ಬಿಜೆಪಿಯ ಮಾತೃಸಂಸ್ಥೆಯಾಗಿರುವ ಆರ್‌ಎಸ್‌ಎಸ್, ಪಕ್ಷದ ಮಹತ್ವದ ನಿರ್ಧಾರಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯಿಂದ ಹಿಡಿದು, ಪ್ರಮುಖ ಹುದ್ದೆಗಳ ನೇಮಕಾತಿಯವರೆಗೆ ಸಂಘದ ಪಡಶಾಲೆಯಲ್ಲಿ ಚರ್ಚೆಗಳು ನಡೆಯುತ್ತವೆ ಎಂಬುದು ಗುಟ್ಟಾಗೇನೂ ಉಳಿದಿಲ್ಲ. ಆದರೆ, ದೇಶದ ಮುಂದಿನ ಪ್ರಧಾನಿ ಅಭ್ಯರ್ಥಿ ಅಥವಾ ಮೋದಿ ಉತ್ತರಾಧಿಕಾರಿ ವಿಚಾರದಲ್ಲಿ ಚೆಂಡನ್ನು ಬಿಜೆಪಿ ಅಂಗಳಕ್ಕೆ ಎಸೆಯುವ ಮೂಲಕ ಮೋಹನ್ ಭಾಗವತ್ ಅಂತರ ಕಾಯ್ದುಕೊಂಡಿದ್ದಾರೆ.
ಇದೇ ವೇದಿಕೆಯಲ್ಲಿ ಇತರ ವಿಷಯಗಳ ಕುರಿತೂ ಮಾತನಾಡಿದ ಭಾಗವತ್, ದೇವಾಲಯಗಳ ನಿರ್ವಹಣೆಯನ್ನು ಸರ್ಕಾರಕ್ಕಿಂತ ಭಕ್ತರೇ ನಿರ್ವಹಿಸಿದರೆ ಉತ್ತಮ ಎಂದು ಅಭಿಪ್ರಾಯಪಟ್ಟರು. ಖಾಸಗಿ ವ್ಯಕ್ತಿಗಳು ಮತ್ತು ಭಕ್ತರ ಸಮಿತಿಗಳು ನಿರ್ವಹಿಸುತ್ತಿರುವ ದೇವಾಲಯಗಳು ಉತ್ತಮ ಸ್ಥಿತಿಯಲ್ಲಿರುವ ಉದಾಹರಣೆಗಳನ್ನು ಅವರು ನೀಡಿದರು.
ಇನ್ನು ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರವನ್ನು ಶ್ಲಾಘಿಸಿದ ಅವರು, ತಮಿಳುನಾಡಿನ ಯುವ ಜನತೆಯಲ್ಲಿ ರಾಷ್ಟ್ರೀಯತೆ ಅಥವಾ ಆರ್‌ಎಸ್‌ಎಸ್ ಬಗ್ಗೆ ಯಾವುದೇ ತಪ್ಪು ಕಲ್ಪನೆಯಿಲ್ಲ. ಯುವಕರು ದೇಶವನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಶಕ್ತಿಯಾಗಿದ್ದಾರೆ ಎಂದು ಹೇಳಿದರು.








