ತರಕಾರಿ ಮಾರಾಟ ಮಾಡುತ್ತಿರುವ ಜ್ಯೂನಿಯರ್ ಫುಟ್ಬಾಲ್ ಆಟಗಾರ
ಭಾರತದಲ್ಲಿ ಕ್ರಿಕೆಟ್ ಆಟಗಾರರು… ಟೆನಿಸ್ ಆಟಗಾರರು ಶ್ರೀಮಂತರು…ಇದರಲ್ಲಿ ಎರಡು ಮಾತಿಲ್ಲ. (ಹಾಗಂತ ಎಲ್ಲರೂ ಅಲ್ಲ) ಇನ್ನುಳಿದಂತೆ, ಹಾಕಿ, ಫುಟ್ಬಾಲ್, ಅಥ್ಲೆಟಿಕ್ಸ್ ಹೀಗೆ ನಾನಾ ಕ್ರೀಡೆಗಳ ಕ್ರೀಡಾಪಟುಗಳು ಎಷ್ಟೇ ಆಟವಾಡಿದ್ರೂ ಅವರ ಕುಟುಂಬದ ಪಾಲನೆ ಮಾಡುವುದು ಕಷ್ಟಕಷ್ಟ..!
ಇದೀಗ ಕೊರೋನಾ ವೈರಸ್ ಹಾವಳಿ.. ಲಾಕ್ ಡೌನ್.. ಕ್ರೀಡಾಪಟುಗಳು ಮನೆಯಲ್ಲೇ ಇದ್ದಾರೆ. ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ. ಹೀಗಾಗಿ ತಮ್ಮ ಕುಟುಂಬದ ಪಾಲನೆ ಮಾಡಲು ಹರಸಾಹಸಪಡುತ್ತಿದ್ದಾರೆ. ಈಗಾಗಲೇ ಅಥ್ಲೀಟ್ ದ್ಯುತಿ ಚಂದ್ ಅವರು ಹಣಕಾಸಿನ ಸಮಸ್ಯೆಯಿಂದಾಗಿ ತನ್ನ ಕಾರನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಅದೇ ರೀತಿ ಪಶ್ಚಿಮ ಬಂಗಾಳದ ಯುವ ಫುಟ್ಬಾಲ್ ಆಟಗಾರನೊಬ್ಬ ತನ್ನ ಕುಟುಂಬದ ನೆರವಿಗಾಗಿ ತರಕಾರಿ ವ್ಯಾಪಾರ ಮಾಡುತ್ತಿದ್ದಾನೆ.
ಹೌದು, ಈತ ಹೇಳಿಕೊಳ್ಳೋಕೆ ಪ್ರತಿಷ್ಠಿತ ಮೋಹನ್ ಬಾಗನ್ ಕ್ಲಬ್ನ ಜ್ಯೂನಿಯರ್ ಆಟಗಾರ. ಈತನ ಹೆಸರು ದೀಪ್ ಬಾಗ್. ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಕೊನ್ನಾನಗರ ಈತನ ಊರು. ಇದೀಗ ತನ್ನ ಕುಟುಂಬದ ದಿನ ನಿತ್ಯದ ವೆಚ್ಚಕ್ಕಾಗಿ ತರಕಾರಿ ಮಾರುತ್ತಿದ್ದಾನೆ. ದುರ್ಗಾಪುರ ಮೋಹನ್ ಬಾಗನ್ 19 ವಯೋಮಿತಿ ಅಕಾಡೆಮಿಯ ಆಟಗಾರ. ಕ್ಲಬ್ನಿಂದ ದೀಪ್ ಬಾಗ್ಗೆ ಒಂದು ಸಾವಿರ ಭತ್ಯೆ ನೀಡುತ್ತಿದೆ. ಆದ್ರೆ ಈ ಒಂದು ಸಾವಿರ ರೂಪಾಯಿಯಲ್ಲಿ ದೀಪ್ ಬಾಗ್ಗೆ ಮನೆಯ ಖರ್ಚು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಅಂದ ಹಾಗೇ ದೀಪ್ ಬಾಗ್ ತಂದೆ ರಿಕ್ಷಾ ಪುಲ್ಲರ್. ಲಾಕ್ ಡೌನ್ನಿಂದಾಗಿ ದೀಪ್ ಬಾಗ್ ಕೂಡ ಮನೆಗೆ ಬಂದಿದ್ದಾರೆ. ಮನೆಯ ಖರ್ಚುವೆಚ್ಚಗಳನ್ನು ಭರಿಸಲು ವಿಧಿ ಇಲ್ಲದೆ ದೀಪ್ ತರಕಾರಿ ಮಾರಾಟ ಮಾಡಬೇಕಾಗಿದೆ.
ನನ್ನ ತಂದೆ ರಿಕ್ಷಾ ಪುಲ್ಲರ್ ಆಗಿ ಕೆಲಸ ಮಾಡುತ್ತಿದ್ದರು. ಈಗ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೀಗಾಗಿ ನಾನು ತರಕಾರಿ ಮಾರಾಟ ಮಾಡುತ್ತಿದ್ದೇನೆ. ಮನೆಯ ದಿನ ನಿತ್ಯದ ಖರ್ಚು, ತಂದೆಯ ಆರೋಗ್ಯಕ್ಕಾಗಿ ನಾನು ಈ ಕೆಲಸವನ್ನು ಮಾಡುತ್ತಿದ್ದೇನೆ ಎಂದು ದೀಪ್ ಬಾಗ್ ಹೇಳ್ತಾರೆ.
ಹಾಗಂತ ನಾನು ಫುಟ್ಬಾಲ್ ಆಟವನ್ನು ಮರೆತಿಲ್ಲ. ನಾನು ವಿಶ್ವಾಸವನ್ನು ಕಳೆದುಕೊಂಡಿಲ್ಲ. ಸಂಜೆಯ ವೇಳೆ ಫುಟ್ಬಾಲ್ ಅಭ್ಯಾಸ ನಡೆಸುತ್ತಿದ್ದೇನೆ. ಲಾಕ್ ಡೌನ್ ಮುಗಿದ ನಂತರ ಮತ್ತೆ ಫುಟ್ಬಾಲ್ ಆಡುತ್ತೇನೆ. ನಾನು ವೃತ್ತಿಪರ ಆಟಗಾರನಾಗಬೇಕು. ಐ ಲೀಗ್ನಲ್ಲೂ ಆಡುವ ಆಸೆ ಇದೆ. ಫುಟ್ಬಾಲ್ ಆಟವೇ ನನ್ನ ಕನಸು ಎಂದು ದೀಪ್ ಹೇಳಿದ್ದಾರೆ.
ಈ ನಡುವೆ, ಮೋಹನ್ ಬಾಗಲ್ ಫ್ಯಾನ್ಸ್ ಕ್ಲಬ್ ಮತ್ತು ಡೆಲ್ಲಿ ಮರಿನೇರ್ಸ್ ಸಾಮಾಜಿಕ ಜಾಲ ತಾಣದ ಮೂಲಕ ಆರ್ಥಿಕ ಸಹಾಯವನ್ನು ನೀಡಲು ಮುಂದಾಗಿದೆ.