ವಿದೇಶಿ ವಿದ್ಯಾರ್ಥಿಗಳಿಗೆ ರಾಜ್ಯದ ಸರಕಾರಿ, ಖಾಸಗಿ ಅನುದಾನಿತ ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳಲ್ಲಿ ಪ್ರವೇಶ ನೀಡುವಾಗ ಹೆಚ್ಚು ನಿಗಾ ವಹಿಸಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆ ಸೂಚಿಸಿದೆ. ವಿದೇಶಿ ವಿದ್ಯಾರ್ಥಿಗಳ ಪಾಸ್ ಪೋರ್ಟ್ ಮತ್ತು ವೀಸಾ ಅವಧಿ ಮುಗಿದಿದ್ದರೂ ಅವರಿಗೆ ಕಾಲೇಜುಗಳಲ್ಲಿ ಪ್ರವೇಶ ನೀಡಿರುವುದು ಗಮನಕ್ಕೆ ಬಂದಿದ್ದು, ಅಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.
ವಿದೇಶಿ ವಿದ್ಯಾರ್ಥಿಗಳ ಪಾಸ್ ಪೋರ್ಟ್ ಮತ್ತು ವೀಸಾವನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಪರಿಶೀಲಿಸದೆ ಪ್ರವೇಶ ನೀಡಿದಲ್ಲಿ ಮುಂದೆ ಆಗುವ ಎಲ್ಲಾ ಅನಾಹುತಗಳಿಗೆ ಪ್ರಾಂಶುಪಾಲರು ನೇರ ಹೊಣೆಯಾಗಿರುತ್ತಾರೆ. ಸೂಚನೆ ಪಾಲಿಸದೇ ಇರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳಲಿದ್ದೇವೆ ಎಂದು ಕಾಲೇಜು ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ.