ಬೆಂಗಳೂರು: ಮಂಕಿಪಾಕ್ಸ್ (Monkeypox) ಕಾಯಿಲೆಯ ಆತಂಕ ಶುರುವಾದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಗಳಲ್ಲಿ (Airport) ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ.
ಕೇಂದ್ರ ಆರೋಗ್ಯ ಇಲಾಖೆಯ ಸೂಚನೆ ಬೆನ್ನಲ್ಲೇ ರಾಜ್ಯ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. ಪಕ್ಕದ ಪಾಕಿಸ್ತಾನ (Pakistan) ಸೇರಿದಂತೆ ವಿವಿಧ ದೇಶಗಳಲ್ಲಿ ಮಂಕಿಪಾಕ್ಸ್ ಪತ್ತೆಯಾಗಿದೆ. ಹೀಗಾಗಿ ರಾಜ್ಯ ಆರೋಗ್ಯ ಇಲಾಖೆ (State Health Deparment) ಅಲರ್ಟ್ ಆಗಿದೆ. ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ಪ್ರಯಾಣಿಕರ ತಪಾಸಣೆಗೆ ಸೂಚಿಸಿದೆ.
ಮಂಕಿಪಾಕ್ಸ್ ಶಂಕಿತರನ್ನು ಗುರುತಿಸಿ ಸ್ಕ್ರೀನಿಂಗ್ ಮಾಡುವಂತೆ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ ಇಡುವಂತೆ ಸೂಚಿಸಿದೆ. ಮಂಕಿಪಾಕ್ಸ್ ವಿಷಯದಲ್ಲಿ ಹೈರಿಸ್ಕ್ ದೇಶಗಳ ಮೇಲೆ ಎಚ್ಚರವಹಿಸುವಂತೆ ಮತ್ತು ಮಂಕಿಪಾಕ್ಸ್ ಕಂಡುಬಂದ ದೇಶಗಳ ಪ್ರಯಾಣಿಕರ ಮೇಲೆ ನಿಗಾ ಇಡುವಂತೆ ಸೂಚಿಸಲಾಗಿದೆ.
ಬೆಂಗಳೂರಿನ ಇಂದಿರಾನಗರದ ಆಸ್ಪತ್ರೆ ಹಾಗೂ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮಂಕಿಪಾಕ್ಸ್ ಶಂಕಿತರ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಮಂಕಿಪಾಕ್ಸ್ ಶಂಕಿತರು ಕಂಡು ಬಂದರೆ ಶಂಕಿತ ಮಾದರಿಗಳನ್ನ ಬಿಎಮ್ ಸಿ ಲ್ಯಾಬ್ ಕಳಿಸುವಂತೆ ಸೂಚಿಸಲಾಗಿದೆ.