ಹೊಸದಿಲ್ಲಿ, ಜೂನ್ 2 : ನೈಋತ್ಯ ಮುಂಗಾರು ಈಗಾಗಲೇ ಕೇರಳ ಪ್ರವೇಶಿಸಿದ್ದು, ಕಳೆದ 24 ಗಂಟೆಗಳಲ್ಲಿ ಕೇರಳದ ಹೆಚ್ಚಿನ ಕಡೆ ಭಾರೀ ಮಳೆಯಾಗಿದೆ. ಈ ಮೊದಲು ಭಾರತೀಯ ಹವಾಮಾನ ಇಲಾಖೆ ಜೂನ್ 1 ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸುವುದಾಗಿ ಮಾಹಿತಿ ನೀಡಿತ್ತು. ಬಹುತೇಕ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ, ತಾಪಮಾನದಲ್ಲಿ ಗಮನಾರ್ಹ ಕುಸಿತ ದಾಖಲಾಗಿದೆ.
ಈ ನಡುವೆ ಭಾರತೀಯ ಹವಾಮಾನ ಇಲಾಖೆ ಮುಂದಿನ ಕೆಲವು ಗಂಟೆಗಳಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆ ನೀಡಿದ್ದು, ಕೇರಳದ ಕೆಲವು ಪ್ರದೇಶಗಳಲ್ಲಿ ಅಲರ್ಟ್ ಜಾರಿಗೊಳಿಸಲಾಗಿದೆ. ತಿರುವನಂತಪುರಂ, ಕೊಲ್ಲಂ, ಪಥನಮತ್ತಟ್ಟ, ಆಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ, ಮಲಪ್ಪುರಂ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಭಾರತೀಯ ಹವಾಮಾನ ಇಲಾಖೆ ತನ್ನ ವೆಬ್ ಸೈಟ್ ನಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಮುಂಗಾರು ಆಗಮನದ ದಿನಾಂಕವನ್ನು ಪ್ರಕಟಿಸಿದೆ.
ಜೂನ್ 1- ಕೇರಳ, ಲಕ್ಷದೀಪ, ಅಂಡಮಾನ್
ಜೂನ್ 1 ರಿಂದ ಜೂನ್ 5 ರವರೆಗೆ – ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ
ಜೂನ್ 5 ರಿಂದ ಜೂನ್ 10 ರವರೆಗೆ – ಮಧ್ಯ ಮಹಾರಾಷ್ಟ್ರ, ತೆಲಂಗಾಣ, ಪಶ್ಚಿಮ ಬಂಗಾಳ
ಜೂನ್ 10 ರಿಂದ 15 – ಮಹಾರಾಷ್ಟ್ರ, ಒಡಿಶಾ, ಛತ್ತೀಸ್ಗಢ ಮತ್ತು ಮಧ್ಯಪ್ರದೇಶದ ಕೆಲವು ಪ್ರದೇಶ, ಜಾರ್ಖಂಡ್, ಬಿಹಾರದ ಅರ್ಧ ಭಾಗ.
ಜೂನ್ 15 ರಿಂದ 20 – ಗುಜರಾತ್ ನ ಕೆಲವು ಭಾಗ, ಮಧ್ಯಪ್ರದೇಶ, ಪೂರ್ವ ಉತ್ತರ ಪ್ರದೇಶ ಹಾಗೂ ಉತ್ತರಾಖಂಡ
ಜೂನ್ 20 ರಿಂದ 25 – ಸಂಪೂರ್ಣ ಗುಜರಾತ್, ಪಶ್ಚಿಮ ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ
ಜೂನ್ 25 ರಿಂದ 30 – ರಾಜಸ್ಥಾನ, ದೆಹಲಿ, ಹರಿಯಾಣ, ಪಂಜಾಬ್
ಜೂನ್ 30 ರಿಂದ ಜುಲೈ 5 – ಸಂಪೂರ್ಣ ಭಾರತ







