ಕೊಡಗು kodagu ಜಿಲ್ಲೆಯಲ್ಲಿ ಮುಂಗಾರು ಅಬ್ಬರ
ಮಡಿಕೇರಿ : ಜಿಲ್ಲೆಯಲ್ಲಿ ಮುಂಗಾರಿನ ಅಬ್ಬರ ಜೋರಾಗುತ್ತಿದೆ. ಕಳೆದ ರಾತ್ರಿ ಶುರುವಾದ ಗಾಳಿ ಸಹಿತ ಮಳೆ ಇಂದೂ ಮುಂದುವರೆದಿದೆ.
ಪರಿಣಾಮ ಜಿಲ್ಲೆಯದಾದ್ಯಂತ ನಾನಾ ಅವಾಂತರಗಳು ಸೃಷ್ಠಿಯಾಗಿದ್ದು, ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿ ವಿದ್ಯುತ್ ಸಂಪರ್ಕ ಹಾಗೂ ರಸ್ತೆ ಅಡಚಣೆಯಾಗಿದೆ.
ಜಿಲ್ಲೆಯಲ್ಲಿ ಮಳೆ ಅಬ್ಬರಿಸುತ್ತಿರುವ ಪರಿಣಾಮ ಗುಡ್ಡಗಾಡಿನ ಜನರು ಹಾಗೂ ನದಿ ಪಾತ್ರದ ಜನರಲ್ಲಿ ಆತಂಕ ಮನೆ ಮಾಡಿದೆ.
ಮಡಿಕೇರಿ ತಾಲೂಕಿನ ಮೂರ್ನಾಡು ಸಮೀಪದ ಬಲುಮುರಿಯಲ್ಲಿ ಪಾರಣೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿದೆ.
ಇತ್ತ ಭಾಗಮಂಡಲದಲ್ಲಿ ವರುಣನ ಅರ್ಭಟ ಮುಂದುವರಿದಿದ್ದು, ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ.
ಅಲ್ಲದೇ ವಿರಾಜಪೇಟೆ ತಾಲೂಕಿನ ಬೇತ್ರಿ ಸೇತುವೆ ಬಳಿಯು ಕಾವೇರಿ ನದಿ ನೀರಿನ ಮಟ್ಟ ಹೆಚ್ಚಾಗುತ್ತಿದೆ.
ಒಟ್ಟಾರೆ ಜಿಲ್ಲೆಯಲ್ಲಿ ಭಾರಿ ವರ್ಷಧಾರೆಯಿಂದಾಗಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಜನರು ಆತಂಕದಲ್ಲಿದ್ದಾರೆ.









