ಮಂಗಳೂರು: ರಕ್ಷಣೆ ಕೋರಿ ಪೊಲೀಸ್ ಠಾಣೆಯ ಮೆಟ್ಟಿಲೇರುವ ಮಹಿಳೆಯರ ಸಂಕಷ್ಟಕ್ಕೆ ಸ್ಪಂದಿಸಿ ನ್ಯಾಯ ಒದಗಿಸಬೇಕಾದ ರಕ್ಷಕರೇ ಭಕ್ಷಕರಾದ ಘನಘೋರ ಪ್ರಕರಣವೊಂದು ಕರಾವಳಿಯಲ್ಲಿ ಸದ್ದು ಮಾಡುತ್ತಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದೂರು ನೀಡಲು ಬಂದ ನೊಂದ ಮಹಿಳೆಯರನ್ನೇ ಮಂಚಕ್ಕೆ ಕರೆಯುತ್ತಿದ್ದರು ಎಂಬ ಗಂಭೀರ ಆರೋಪದಡಿಯಲ್ಲಿ ಮೂಡುಬಿದಿರೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ಅವರನ್ನು ಅಮಾನತುಗೊಳಿಸಲಾಗಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ ಅವರು ಈ ಬಗ್ಗೆ ಮಹತ್ವದ ಆದೇಶ ಹೊರಡಿಸಿದ್ದು, ಆರೋಪಿತ ಅಧಿಕಾರಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿದ್ದಾರೆ.
ಅಮಾನತಿಗೆ ಪ್ರಮುಖ ಕಾರಣವಾದ ಎಸಿಪಿ ವರದಿ ಮತ್ತು ವೈರಲ್ ಆಡಿಯೋ
ಇನ್ಸ್ಪೆಕ್ಟರ್ ಸಂದೇಶ್ ವಿರುದ್ಧ ಕೇಳಿಬಂದಿದ್ದ ಲೈಂಗಿಕ ಕಿರುಕುಳ, ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗದ ಆರೋಪಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಎಸಿಪಿ (ACP) ನೇತೃತ್ವದಲ್ಲಿ ಪ್ರಾಥಮಿಕ ತನಿಖೆ ನಡೆಸಲಾಗಿತ್ತು. ಈ ತನಿಖಾ ವರದಿಯೇ ಸಂದೇಶ್ ಅವರ ಕೊರಳಿಗೆ ಉರುಳಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ವಿಡಿಯೋ ಮತ್ತು ಆಡಿಯೋ ತುಣುಕುಗಳು ಇನ್ಸ್ಪೆಕ್ಟರ್ ಅವರ ಬಣ್ಣವನ್ನು ಬಯಲು ಮಾಡಿವೆ. ಈ ಆಡಿಯೋಗಳಲ್ಲಿ ಇನ್ಸ್ಪೆಕ್ಟರ್ ಅವರು ಮಹಿಳೆಯೊಬ್ಬರ ಜೊತೆ ನಡೆಸಿರುವ ಸಂಭಾಷಣೆ ಅತ್ಯಂತ ಅಸಭ್ಯವಾಗಿತ್ತಲ್ಲದೆ, ಕಾಮದ ಮತ್ತು ಲೈಂಗಿಕಾಸಕ್ತಿಯ ಮಾತುಗಳನ್ನಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಶಿಸ್ತಿನ ಇಲಾಖೆಯಲ್ಲಿದ್ದುಕೊಂಡು ಸಮವಸ್ತ್ರದ ಘನತೆಗೆ ಕುಂದು ತರುವ ರೀತಿಯಲ್ಲಿ ವರ್ತಿಸಿರುವುದು ಇಲಾಖೆಗೆ ಮುಜುಗರ ಉಂಟುಮಾಡಿದೆ ಎಂದು ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಈ ಪ್ರಕರಣದ ಕುರಿತು ಸುದೀರ್ಘ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಅವರು, ಮಾಧ್ಯಮಗಳ ಮುಂದೆ ಬಂದು ಇನ್ಸ್ಪೆಕ್ಟರ್ ವಿರುದ್ಧ ಆರೋಪ ಮಾಡಿದ್ದ ಸುಮತಿ ನಾಯಕ್ ಮತ್ತು ಅವಿತಾ ಮಿನಾಜೆಸ್ ಎಂಬುವರ ಪ್ರಕರಣಗಳ ಹಿನ್ನೆಲೆಯನ್ನೂ ತೆರೆದಿಟ್ಟಿದ್ದಾರೆ.
ಸುಮತಿ ನಾಯಕ್ ಪ್ರಕರಣ: ಇವರು ಮತ್ತು ಅವರ ಸಹೋದರಿಯ ನಡುವೆ ಕೌಟುಂಬಿಕ ಕಲಹಗಳಿದ್ದು, ಆಸ್ತಿ ಮತ್ತು ವೈಯಕ್ತಿಕ ವಿಚಾರಗಳಿಗೆ ಸಂಬಂಧಿಸಿದಂತೆ ಇಬ್ಬರ ವಿರುದ್ಧವೂ ತಲಾ ಎರಡು ಪ್ರಕರಣಗಳು ದಾಖಲಾಗಿವೆ. ಇನ್ಸ್ಪೆಕ್ಟರ್ ವಿರುದ್ಧ ಇವರು ದೂರು ನೀಡಿದ್ದರೂ, ಪ್ರಸ್ತುತ ಈ ಎಲ್ಲಾ ಪ್ರಕರಣಗಳಿಗೆ ಹೈಕೋರ್ಟ್ ತಡೆಯಾಜ್ಞೆ (Stay) ನೀಡಿದೆ.
ಅವಿತಾ ಮಿನಾಜೆಸ್ ಪ್ರಕರಣ: ಇನ್ಸ್ಪೆಕ್ಟರ್ ಲಂಚ ಮತ್ತು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದ ಅವಿತಾ ಅವರ ಪತಿಯ ವಿರುದ್ಧವೇ ಈಗಾಗಲೇ ನಾಲ್ಕು ಕ್ರಿಮಿನಲ್ ಪ್ರಕರಣಗಳಿವೆ. ಅಚ್ಚರಿಯ ವಿಚಾರವೆಂದರೆ, ಬಡವರ ಕಿಡ್ನಿ ಚಿಕಿತ್ಸೆಗಾಗಿ ಸಂಗ್ರಹಿಸಿದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಸ್ವತಃ ಅವಿತಾ ಅವರೇ ಆರೋಪಿಯಾಗಿದ್ದಾರೆ. ಅವಿತಾ ಅವರು ತಮಗೆ ಠಾಣೆಯಲ್ಲಿ ಕಿರುಕುಳ ನೀಡಲಾಯಿತು ಎಂದು ಆರೋಪಿಸಿದ ಸಮಯದಲ್ಲಿ ಠಾಣೆಯಲ್ಲಿ ಸಿಸಿಟಿವಿ ಕಾರ್ಯಾಚರಿಸುತ್ತಿತ್ತು. ಅಲ್ಲದೆ, ಆ ಸಮಯದಲ್ಲಿ ಇಬ್ಬರು ಮಾಧ್ಯಮ ಪ್ರತಿನಿಧಿಗಳು ಮತ್ತು ಒಬ್ಬ ವಕೀಲರು ಸ್ಥಳದಲ್ಲಿದ್ದರು. ಇವರ್ಯಾರೂ ಕಿರುಕುಳ ನಡೆದಿದೆ ಎಂದು ಹೇಳಿಕೆ ನೀಡಿಲ್ಲ.
ಅಚ್ಚರಿಯ ಸಂಗತಿ ಏನೆಂದರೆ, ಮಾಧ್ಯಮಗಳ ಮುಂದೆ ಬಂದು ಅಳಲು ತೋಡಿಕೊಂಡ ಮಹಿಳೆಯರ ದೂರಿನ ಆಧಾರದ ಮೇಲೆ ಈ ಅಮಾನತು ನಡೆದಿಲ್ಲ. ಬದಲಾಗಿ, ಕಮಿಷನರ್ ಅವರು ತಿಳಿಸಿದಂತೆ ವೈರಲ್ ಆಗಿರುವ ಆಡಿಯೋದಲ್ಲಿರುವ ಧ್ವನಿ ಬೇರೆಯದೇ ಇಬ್ಬರು ಮಹಿಳೆಯರದ್ದಾಗಿದೆ. ಆಡಿಯೋದಲ್ಲಿ ಇನ್ಸ್ಪೆಕ್ಟರ್ ಸಂದೇಶ್ ಅವರು ಆ ಮಹಿಳೆಯರೊಂದಿಗೆ ನಡೆಸಿರುವ ಅಸಭ್ಯ ಮಾತುಕತೆ, ಸರಸಸಲ್ಲಾಪ ಮತ್ತು ದುರ್ವರ್ತನೆ ಕೃತ್ಯವು ಅಧಿಕಾರಿಯೊಬ್ಬರಿಗೆ ಶೋಭೆ ತರುವಂತದ್ದಲ್ಲ. ಆ ಮಹಿಳೆಯರು ದೂರು ನೀಡಲು ಮುಂದೆ ಬರದಿದ್ದರೂ, ಸಾಕ್ಷ್ಯಾಧಾರಗಳು ಅಧಿಕಾರಿಯ ಅಶಿಸ್ತನ್ನು ಎತ್ತಿ ತೋರಿಸಿರುವುದರಿಂದ ಸ್ವಯಂಪ್ರೇರಿತವಾಗಿ ಶಿಸ್ತು ಕ್ರಮ ಜರುಗಿಸಲಾಗಿದೆ.
ಪೊಲೀಸ್ ಇಲಾಖೆ ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಠಾಣೆಗೆ ಬರುವ ಮಹಿಳೆಯರ ಘನತೆಗೆ ಚ್ಯುತಿ ತರುವ ಕೆಲಸವನ್ನು ಯಾರೇ ಮಾಡಿದರೂ ಸಹಿಸುವುದಿಲ್ಲ ಎಂದು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಸದ್ಯ ಅಮಾನತುಗೊಂಡಿರುವ ಸಂದೇಶ್ ವಿರುದ್ಧ ಇಲಾಖಾ ಮಟ್ಟದ ಸಮಗ್ರ ತನಿಖೆ ಮುಂದುವರಿಯಲಿದ್ದು, ನೊಂದ ಸಂತ್ರಸ್ತೆಯರು ನಿರ್ಭೀತಿಯಿಂದ ಮುಂದೆ ಬಂದು ದೂರು ನೀಡಲು ಇಲಾಖೆ ಮುಕ್ತ ಅವಕಾಶ ಕಲ್ಪಿಸಿದೆ. ಒಟ್ಟಿನಲ್ಲಿ ರಕ್ಷಣೆ ಕೊಡಬೇಕಾದ ಕೈಗಳೇ ಅಸಭ್ಯವಾಗಿ ವರ್ತಿಸಿದರೆ ಏನಾಗುತ್ತದೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.








