ಈ ವರ್ಷದ ಮಾರ್ಚ್ ವೇಳೆಗೆ 10 ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನ ನೊಂದಾವಣೆ – ಗಡ್ಕರಿ
ಈ ವರ್ಷ ಮಾರ್ಚ್ 13 ರ ವೇಳೆಗೆ ಭಾರತದಲ್ಲಿ 10 ಲಕ್ಷಕ್ಕೂ ಹೆಚ್ಚು ನೋಂದಾಯಿತ ಎಲೆಕ್ಟ್ರಿಕ್ ವಾಹನಗಳು ರಸ್ತೆಗಿಳಿದಿವೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಇಂದು ಲೋಕಸಭೆಗೆ ತಿಳಿಸಿದರು. ಸಂಸತ್ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಗಡ್ಕರಿ, ಈ ವರ್ಷದ ಮಾರ್ಚ್ 13 ರ ಹೊತ್ತಿಗೆ, 10,95,746 ಎಲೆಕ್ಟ್ರಿಕ್ ವಾಹನಗಳು ಭಾರತದಲ್ಲಿ 1,742 ಚಾರ್ಜಿಂಗ್ ಸ್ಟೇಷನ್‌ಗಳೊಂದಿಗೆ ನೋಂದಣಿಯಾಗಿವೆ ಎಂದು ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (ಬಿಇಇ) ಅಂಕಿಅಂಶಗಳನ್ನು ಉಲ್ಲೇಖಿಸಿ ಹೇಳಿದರು.
ವರ್ಷದಿಂದ ವರ್ಷಕ್ಕೆ ಒಟ್ಟಾರೆ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಶೇಕಡಾ 162 ರಷ್ಟು ಏರಿಕೆಯಾಗಿದೆ ಎಂದು ಗಡ್ಕರಿ ಹೇಳಿದರು. ವಿಭಾಗವಾರು ದ್ವಿಚಕ್ರ ವಾಹನಗಳ ಮಾರಾಟವು ಐದು ಪಟ್ಟು ಹೆಚ್ಚಿದ್ದು, ಶೇ 423, ತ್ರಿಚಕ್ರ ವಾಹನಗಳು ಶೇ 75, ನಾಲ್ಕು ಚಕ್ರಗಳು ಶೇ 238 ಮತ್ತು ಬಸ್‌ಗಳು ಶೇ 1,250 ರಷ್ಟು ಹೆಚ್ಚಾಗಿದೆ. ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ತ್ವರಿತ ಅಳವಡಿಕೆ ಮತ್ತು ತಯಾರಿಕೆಯ ಯೋಜನೆಯಡಿ 68 ನಗರಗಳಲ್ಲಿ 2,877 ಸಾರ್ವಜನಿಕ ಇವಿ ಚಾರ್ಜಿಂಗ್ ಕೇಂದ್ರಗಳನ್ನು ಮಂಜೂರು ಮಾಡಲಾಗಿದೆ ಎಂದು ಸಚಿವರು ಹೇಳಿದರು.
ಮುಂಬೈ, ದೆಹಲಿ, ಬೆಂಗಳೂರು, ಅಹಮದಾಬಾದ್, ಚೆನ್ನೈ, ಕೋಲ್ಕತ್ತಾ, ಸೂರತ್ ಮತ್ತು ಪುಣೆಯಲ್ಲಿ ನಾಲ್ಕು ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಎಂಟು ನಗರಗಳಿಗೆ BEE ನಿಂದ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಗಡ್ಕರಿ ತಿಳಿಸಿದರು.