ಅಮೆರಿಕದಲ್ಲಿ ಕೋವಿಡ್-19 ತನ್ನ ರುದ್ರ ನರ್ತನ ಮುಂದುವರಿಸಿದ್ದು, ಒಟ್ಟು ಸಾವಿನ ಸಂಖ್ಯೆ 25 ಸಾವಿರದ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ ಕೊರೊನಾ ಸೋಂಕಿನಿಂದ 2,228 ಮಂದಿ ಸಾವನ್ನಪ್ಪಿದ್ದು, ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ 25,757ಕ್ಕೆ ಏರಿದೆ. ಕೊರೋನಾ ಸೋಂಕಿತರ ಸಂಖ್ಯೆ ಆರು ಲಕ್ಷ ದಾಟಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಿದೆ.
ಜಗತ್ತಿನಾದ್ಯಂತ ಒಟ್ಟು 20,00,794 ಸೋಂಕಿತರು ವರದಿಯಾಗಿದ್ದರೆ, ಅಮೆರಿಕ ಒಂದರಲ್ಲೇ 6,02,989 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಈ ಪೈಕಿ 25,757 ಮಂದಿ ಸಾವನ್ನಪ್ಪಿದ್ದಾರೆ. ನ್ಯೂಯಾರ್ಕ್ ಒಂದರಲ್ಲಿಯೇ ಸಾವಿನ ಸಂಖ್ಯೆ 10,000 ದಾಟಿದ್ದು, ಸೋಂಕಿತರ ಸಂಖ್ಯೆ 1.80 ಲಕ್ಷ ದಾಟಿದೆ. ನ್ಯೂರ್ಯಕ್ ಮಾತ್ರವಲ್ಲದೆ ಸಚೂಸೆಟ್ಸ್, ಮಿಚಿಗನ್, ಪೆನ್ಸಿಲ್ವೇನಿಯಾ, ಕ್ಯಾಲಿಫೋರ್ನಿಯಾ, ಇಲಿನಾಯ್ಸ್ ಮತ್ತು ಲೂಯಿಸಿಯಾನದಲ್ಲೂ ಸೋಂಕು ತೀವ್ರವಾಗಿ ಹಬ್ಬಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದ ಎಲ್ಲಾ ರಾಜ್ಯಗಳಲ್ಲಿಯೂ ರಾಷ್ಟ್ರೀಯ ತುರ್ತುಸ್ಥಿತಿ ಘೋಷಿಸಿದ್ದು, ತುರ್ತು ಕಾರ್ಯಗಳನ್ನು ಕೈಗೊಳ್ಳಲು 50 ಸಾವಿರ ಯೋಧರನ್ನು ನಿಯೋಜಿಸಿದ್ದಾರೆ.








