ತರಗತಿಗಳಿಗೆ ಹಾಜರಾಗದ 80ಕ್ಕೂ ಅಧಿಕ ವಿದ್ಯಾರ್ಥಿಗಳು Saaksha Tv
ಕಲಬುರಗಿ: ಹಿಜಾಬ್ ಧರಿಸಲು ಅವಕಾಶ ನೀಡದ ಕಾರಣ ಹೈಸ್ಕೂಲ್ ವಿದ್ಯಾರ್ಥಿನಿಯರು ಶಾಲೆಗೆ ಗೈರಾಗಿರುವ ಪ್ರಸಂಗ ಕಲಬುರಗಿಯಲ್ಲಿ ನಡೆದಿದೆ.
ಕಲಬುರಗಿ ನಗರದ ಜಗತ್ ಬಳಿಯಿರುವ ಉರ್ದು ಶಾಲೆಯ 8, 9, 10ನೇ ತರಗತಿಯಲ್ಲಿ ಓದುತ್ತಿದ್ದ 80ಕ್ಕೂ ಅಧಿಕ ವಿದ್ಯಾರ್ಥಿಗಳು ಇಂದು ತರಗತಿಗೆ ಹಾಜರಾಗಿಲ್ಲ. ಉರ್ದು ಶಾಲೆಯ ತರಗತಿಗಳು ಖಾಲಿಯಾಗಿದ್ದು ಶಿಕ್ಷಕರು ಮಾತ್ರ ಎಂದಿನಂತೆ ಶಾಲೆಗೆ ಆಗಮಿಸಿದ್ದಾರೆ.
ಸೋಮವಾರ ಜೇವರ್ಗಿಯ ಉರ್ದು ಶಾಲೆಯ ವಿದ್ಯಾರ್ಥಿನಿಯರು ಶಾಲೆಗೆ ಹಿಜಾಬ್ ಧರಿಸಿ ಆಗಮಿಸಿದ್ದರು. ಇದು ಹೈಕೋರ್ಟ್ ಸೂಚಿಸಿದ ವಿದ್ಯಾರ್ಥಿಗಳು ಹಿಜಾಬ್, ಕೇಸರಿ ಶಾಲು ಸೇರಿದಂತೆ ಯಾವುದೇ ಧಾರ್ಮಿಕ ಭಾವನೆಯನ್ನು ಬಿಂಬಿಸುವ ವಸ್ತ್ರಗಳನ್ನು ಧರಿಸುವಂತಿಲ್ಲ ಎಂಬ ಸಮವಸ್ತ್ರ ನಿಯಮ ಉಲ್ಲಂಘನೆಯಾಗಿತ್ತು.
ಈ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಶಿಕ್ಷಕರು ನಾವು ವಿದ್ಯಾರ್ಥಿನಿಯರಿಗೆ ಹೈಕೋರ್ಟ್ ಆದೇಶದ ಬಗ್ಗೆ ಮೊದಲೇ ತಿಳಿಸಿದ್ದೆವು. ನಮ್ಮಲ್ಲಿ ಹೆಚ್ಚಿನ ವಿದ್ಯಾರ್ಥಿನಿಯರು ಹಳ್ಳಿಯಿಂದ ಬರುತ್ತಾರೆ. ಅವರಿಗೆ ನಿಯಮಗಳ ಬಗ್ಗೆ ಹೆಚ್ಚಾಗಿ ತಿಳಿದಿರದ ಕಾರಣ ಹಿಜಾಬ್ ಧರಿಸಿಯೇ ಶಾಲೆಯ ಆವರಣ ಪ್ರವೇಶಿಸಿದ್ದರು ಎಂದು ತಿಳಿಸಿದರು.
ಈ ವಿದ್ಯಾ ಸಂಸ್ಥೆಗೆ ಬರುವ ಎಲ್ಲಾ ವಿದ್ಯಾರ್ಥಿನಿಯರೂ ಮುಸ್ಲಿಂ ಸಮುದಾಯದವರು. ನಾವು 2-3 ದಿನಗಳ ಹಿಂದೆಯೇ ಸರ್ಕಾರದ ಆದೇಶದ ಬಗ್ಗೆ ಅವರಿಗೆ ಸೂಚನೆ ನೀಡಿದ್ದೆವು. ಅವರು ತರಗತಿ ಸಮಯಕ್ಕಿಂತ ಮೊದಲೇ ಶಾಲಾ ಆವರಣ ಪ್ರವೇಶಿಸಿದ್ದರಿಂದ ಎಚ್ಚರಿಕೆ ನೀಡುವಲ್ಲಿ ವಿಳಂಬವಾಗಿತ್ತು ಎಂದು ಹೇಳಿದ್ದರು.