ಬಳ್ಳಾರಿ: ಮನೆಯಿಂದ ನಾಪತ್ತೆಯಾದ 25 ವರ್ಷಗಳ ನಂತರ ತಾಯಿ ಪತ್ತೆಯಾಗಿದ್ದು, ಮಕ್ಕಳು ತಾಯಿಯನ್ನು ಕಂಡು ಕಣ್ಣೀರು ಸುರಿಸಿದ್ದಾರೆ.
ಈ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಸಾಕಮ್ಮಾ 25 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ. ಈಕೆ ಮನೆಯಿಂದ ದೂರವಾಗಿ 25 ವರ್ಷಗಳು ಕಳೆದಿದ್ದವು. ಆ ಮಹಿಳೆಯ ಸುಳಿವೇ ಸಿಗದ ಕಾರಣ ಕುಟುಂಬಸ್ಥರು ಸಾವನ್ನಪ್ಪಿರಬಹುದು ಎಂದು ಭಾವಿಸಿದ್ದರು. ಆದರೆ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಅವರ ಇಚ್ಚಾಶಕ್ತಿಯಿಂದ, ಕುಟುಂಬಸ್ಥರು ಮೃತಪಟ್ಟಿದ್ದಾಳೆ ಅಂದುಕೊಂಡಿದ್ದ ಮಹಿಳೆ ದೂರದ ಹಿಮಾಚಲ ಪ್ರದೇಶದ (Himachal Pradesh) ಮಂಡಿಯಲ್ಲಿ (Mandi) ಪತ್ತೆಯಾಗಿದ್ದಾರೆ.
ನಾಪತ್ತೆಯಾಗಿದ್ದ ಸಾಕಮ್ಮಾ ಇದೀಗ ಹಿಮಾಚಲ ಪ್ರದೇಶದ ನಿರಾಶ್ರಿತರ ಶಿಬಿರದಲ್ಲಿ ಇರುವುದು ಪತ್ತೆಯಾಗಿದೆ. ಇಬ್ಬರು ಗಂಡು ಮಕ್ಕಳು, ಓರ್ವ ಹೆಣ್ಣು ಮಗುವಿನ ತಾಯಿಯಾಗಿದ್ದ ಸಾಕಮ್ಮಾ, ಮಾನಸಿಕ ಸಮಸ್ಯೆ ಹೊಂದಿದ್ದರು. ಮಕ್ಕಳಾದ ವಿಕ್ರಮ್, ಬೋಧರಾಜ್, ಲಕ್ಷ್ಮೀ ಚಿಕ್ಕವರಿರುವಾಗಲೇ ಹೊಸಪೇಟೆಯಿಂದ ಆಕಸ್ಮಿಕವಾಗಿ ರೈಲು ಹತ್ತಿ ಹಿಮಾಚಾಲ ಪ್ರದೇಶಕ್ಕೆ ಹೋಗಿದ್ದರು. ಅಲ್ಲಿ ಅನಾಥವಾಗಿದ್ದ ಸಾಕಮ್ಮಾ ಹಿಮಾಚಲ ಪ್ರದೇಶದ ಮಂಡಿಯ ನಿರಾಶ್ರಿತ ಶಿಬಿರದಲ್ಲೇ ಆಶ್ರಯ ಪಡೆದಿದ್ದರು ಎನ್ನಲಾಗಿದೆ.
ಹಿಮಾಚಲ ಪ್ರದೇಶದ ಮಂಡಿಯಲ್ಲಿ ಮಂಡ್ಯ ಮೂಲದ ಐಪಿಎಸ್ ಅಧಿಕಾರಿ ರವಿನಂದನ್ ಈ ಕುರಿತು ತಮ್ಮ ಸ್ನೇಹಿತರಿಗೆ ವಿಡಿಯೋ ಮೂಲಕ ಮಾಹಿತಿ ನೀಡಿದ್ದರು. ಐಪಿಎಸ್ ಅಧಿಕಾರಿಯ ಸ್ನೇಹಿತ ಸಾಕಮ್ಮ ಅವರ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ಇದನ್ನು ಗಮನಿಸಿದ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ ಮಣಿವಣ್ಣನ್, ಆ ಬಳಿಕ ಐಪಿಎಸ್ ಅಧಿಕಾರಿ ರವಿನಂದನ್ ಜೊತೆ ಚರ್ಚೆ ನಡೆಸಿ, ಮಾಹಿತಿ ಪಡೆದಿದ್ದರು. ಬಳ್ಳಾರಿ ಮೂಲದ ಅಜ್ಜಿ ಬಗ್ಗೆ ಬಳ್ಳಾರಿಯ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಈಗ ಮಕ್ಕಳು ಮಂಡಿಯಿಂದಲೇ ವೀಡಿಯೋ ಕಾಲ್ ಮೂಲಕ ತಾಯಿ ಜೊತೆ ಮಾತನಾಡಿದ್ದಾರೆ. ಸಾಕಮ್ಮಾ ಅವರ ಮಕ್ಕಳು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಈಗ ಮತ್ತೆ ತಾಯಿ ಮನೆ ಸೇರುವಂತಾಗಿದೆ.








