ಬೆಂಗಳೂರು: ಮಗಳು, ತನ್ನ ಪ್ರಿಯಕರನೊಂದಿಗೆ ಸೇರಿ ತಾಯಿಯನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ.
ಸರಸ ಸಲ್ಲಾಪದಲ್ಲಿದ್ದಾಗ ಮಗಳು ಸಿಕ್ಕಿ ಬಿದ್ದಿದ್ದಾಳೆ. ಇದನ್ನು ಪ್ರಶ್ನಿಸಿದ ತಾಯಿಯನ್ನು ತನ್ನ ಪ್ರಿಯಕರನೊಂದಿಗೆ ಸೇರಿ ಮುಗಿಸಿದ್ದಾಳೆ. ಈ ಘಟನೆ ಬೊಮ್ಮನಹಳ್ಳಿಯ ಹೊಂಗಸಂದ್ರದಲ್ಲಿ ನಡೆದಿದೆ.
ಜಯಲಕ್ಷ್ಮಿ (46) ಕೊಲೆಯಾದ ದುರ್ದೈವಿ ತಾಯಿ. ಪುತ್ರಿ ಸ್ನೇಹಿತನ ಜೊತೆ ಸೇರಿ ತಾಯಿಯನ್ನು ಕತ್ತು ಹಿಸುಕಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾಳೆ. ಈ ಕುರಿತು ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಯಾಗಿರುವ ಮಹಿಳೆ ದಿನಸಿ ಅಂಗಡಿ ಹಾಕಿಕೊಂಡು ಜೀವನ ನಡೆಸುತ್ತಿದ್ದರು. ಇತ್ತ ಆಕೆಯ ಮಗಳು ಸ್ನೇಹಿತನ ಜೊತೆ ಸಂಬಂಧ ಹೊಂದಿದ್ದಳು.
ತಾಯಿ ಇಲ್ಲದ ವೇಳೆ ಆತನ ಮನೆಗೆ ಬರುತ್ತಿದ್ದ. ಆ ವೇಳೆಯೇ ತಾಯಿಗೆ ಮಗಳು ಸಿಕ್ಕಿ ಬಿದ್ದಿದ್ದಾಳೆ. ಇದರಿಂದ ಗಾಬರಿಗೊಂಡ ಮಗಳು, ಪ್ರಿಯಕರನೊಂದಿಗೆ ಸೇರಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.








