ಪುತ್ತೂರು: ಕೊರೊನಾ ಸೋಂಕಿತ ವ್ಯಕ್ತಿಯ ತಾಯಿ ನಿಧನ-ಹಿಂಜಾವೇ ನೇತೃತ್ವದಲ್ಲಿ ನಡೆದ ಅಂತ್ಯಸಂಸ್ಕಾರ
ಪುತ್ತೂರು, ಜುಲೈ 18: ಪುತ್ತೂರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರ ತಾಯಿ ಜುಲೈ18 ರಂದು ನಿಧನರಾಗಿದ್ದು, ಹಿಂಜಾವೇ ನೇತೃತ್ವದಲ್ಲಿ ಅವರ ಅಂತ್ಯ ಸಂಸ್ಕಾರವನ್ನು ಸರಕಾರಿ ನಿಯಮದಂತೆ ನಡೆಸಲಾಗಿದೆ.
ಕೆಮ್ಮಿಂಜೆ ಗ್ರಾಮದ ಮರೀಲ್ ಮದಗ ನಿವಾಸಿಯಾದ ಲಕ್ಷ್ಮೀ(85) ಅವರು ವಯೋಸಹಜ ಕಾರಣದಿಂದ ಜುಲೈ 18ರಂದು ಮೃತಪಟ್ಟಿದ್ದರು. ಇತ್ತೀಚೆಗೆ ಅವರ ಮಗನಿಗೆ ಕೊರೋನಾ ಸೋಂಕು ದೃಢ ಪಟ್ಟಿದ್ದು, ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಗನಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ತಾಯಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ವರದಿ ಇನ್ನೂ ಲಭ್ಯವಾಗಿಲ್ಲ. ಆದರೆ ಕೊರೋನಾ ಸೋಂಕಿತ ಪುತ್ರನೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಹಿನ್ನೆಲೆಯಲ್ಲಿ ಮೃತದೇಹವನ್ನು ಮುಂಜಾಗ್ರತಾ ಕ್ರಮವಾಗಿ ಪುತ್ತೂರು ಸ್ಮಶಾನದಲ್ಲಿ ಸರಕಾರಿ ನಿಯಮದಂತೆ ಜುಲೈ 18 ರ ಸಂಜೆ ಅಂತ್ಯ ಸಂಸ್ಕಾರ ನಡೆಸಲಾಗಿದೆ.
ಕೋವಿಡ್-19 ಸೋಂಕಿನ ಭೀತಿಯ ಹಿನ್ನಲೆಯಲ್ಲಿ ಮೃತ ದೇಹವನ್ನು ಪಿಪಿಇ ಕಿಟ್ ಧರಿಸಿ ಅಂತ್ಯ ಸಂಸ್ಕಾರ ನಡೆಸಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಹಿಂಜಾವೇ ಯುವಕರು ಅಂತ್ಯಸಂಸ್ಕಾರ ನಡೆಸಲು ಮುಂದೆ ಬಂದಿದ್ದು, ಪುತ್ತೂರು ಮಡ್ಯಲಕಟ್ಟೆಯಲ್ಲಿರುವ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿದೆ. ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ, ಹಿಂದೂ ಜಾಗರಣಾ ವೇದಿಕೆ ತಾಲೂಕು ಅಧ್ಯಕ್ಷ ಅಶೋಕ್ ತ್ಯಾಗರಾಜನಗರ, ನಗರ ಕಾರ್ಯದರ್ಶಿ ಪುಟ್ಟಣ್ಣ ಮರಿಕೆ, ಅಂಬುಲೆನ್ಸ್ ಚಾಲಕ ದಯಾನಂದ, ನಗರಸಭಾ ಸದಸ್ಯ ಜಗನ್ನಿವಾಸ ರಾವ್, ಡಾ.ದೀಪಕ್ ರೈ, ಹಿಂಜಾವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಿತ್ ಹೊಸಮನೆ, ಸುಜಿತ್ ಸಂಟ್ಯಾರ್ ಅವರ ನೇತೃತ್ವದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.