ಕೋಲ್ಕತ್ತಾ: ಆರ್‌ಜಿ ಕರ್ (RG Kar Case) ಆಸ್ಪತ್ರೆಯ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಸಂಜಯ್ ರಾಯ್‌ನ ತಾಯಿ ಮಾಲತಿ ರಾಯ್ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ.
ನನ್ನ ಮಗ ತಪ್ಪಿತಸ್ಥನಾಗಿದ್ದರೆ, ಗಲ್ಲಿಗೆ ಏರಿಸಿದರೂ ಬೇಸರವಿಲ್ಲ ಎಂದು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೀಲ್ಡಾ ನ್ಯಾಯಾಲಯ (Court) ಸಂಜಯ್‌ನನ್ನು ದೋಷಿ ಎಂದು ತೀರ್ಪು ನೀಡಿದೆ.
ಈ ವಿಚಾರವಾಗಿ ಮಾತನಾಡಿದ ತಾಯಿ, ನಾನು ಒಂಟಿಯಾಗಿದ್ದಾಗ ಅಳುತ್ತೇನೆ, ಆದರೆ ಅವನ ಶಿಕ್ಷೆಯನ್ನು ವಿಧಿ ಎಂದು ಸ್ವೀಕರಿಸುತ್ತೇನೆ. ಮಹಿಳೆಯಾಗಿ ಮತ್ತು ಮೂರು ಹೆಣ್ಣು ಮಕ್ಕಳ ತಾಯಿಯಾಗಿ, ನನ್ನ ಮಗಳಂತಿರುವ ವೈದ್ಯೆಯ ತಾಯಿಯ ಯಾತನೆ ಮತ್ತು ನೋವನ್ನು ನಾನು ಅನುಭವಿಸಬಲ್ಲೆ. ಆತ ಮಾಡಿರುವ ಅಪರಾಧ ಕಾನೂನಿನ ದೃಷ್ಟಿಯಲ್ಲಿ ಸಾಬೀತಾಗಿದ್ದರಿಂದಾಗಿ ಯಾವುದೇ ಆಕ್ಷೇಪವಿಲ್ಲ ಎಂದು ಹೇಳಿದ್ದಾರೆ.
ಕಳೆದ ವರ್ಷ ಆಗಸ್ಟ್ 9ರಂದು ಬೆಳಗ್ಗೆ ಸ್ನಾತಕೋತ್ತರ ತರಬೇತಿ ನಿರತ ವೈದ್ಯೆಯ ಶವ ಆಸ್ಪತ್ರೆಯ ಸೆಮಿನಾರ್ ಹಾಲ್ ನಲ್ಲಿ ಅತ್ಯಾಚಾರ ಮತ್ತು ಕೊಲೆಯಾದ ರೀತಿಯಲ್ಲಿ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಸಂಜಯ್ ನನ್ನು ಬಂಧಿಸಿದ್ದರು.








